ಸೌಂದರ್ಯ ಕಾಳಜಿಯೇ ಸಮಂತಾಗೆ ಮುಳುವಾಯ್ತಾ? ಮಯೋಸಿಟಿಸ್​ ಕಾಯಿಲೆಗೆ ಕಾರಣ ಬಹಿರಂಗ

Samantha
Published on

ಹೈದರಾಬಾದ್​: ಕಳೆದ ಎರಡು ತಿಂಗಳಿನಿಂದ ಸಮಂತಾ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ, ಅವರಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ಹೇಳಲಾಗಿತ್ತು. ಸಮಂತಾ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದಾರೆ ಎಂದು ಸುದ್ದಿಯಾಗಿತ್ತು. ಅಲ್ಲದೆ, ಈ ಸುದ್ದಿ ಸುಳ್ಳು ಎಂದು ಹೇಳಲಾಗಿತ್ತು. ಆದರೆ, ಸಮಂತಾ ಮಾತ್ರ ಎಲ್ಲಿಯೂ ಸ್ಪಷ್ಟನೆ ನೀಡಿರಲಿಲ್ಲ. ಆದರೆ, ಇದೀಗ ಸಮಂತಾ ಅವರೇ ತಮಗಿರುವ ಆರೋಗ್ಯದ ಸಮಸ್ಯೆ ಬಗ್ಗೆ ಬಹಿರಂಗಪಡಿಸಿದ್ದಾರೆ.

ಮಯೋಸಿಟಿಸ್​ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಈ ಕಾಯಿಲೆಯಿಂದ ಮಾಂಸಖಂಡಗಳು ವೀಕ್​ ಆಗುತ್ತವಂತೆ. ಮಾಂಸಖಂಡಗಳಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತವಂತೆ. ಶನಿವಾರ ಸೋಷಿಯಲ್​ ಮೀಡಿಯಾದಲ್ಲಿ ಈ ಕುರಿತು ಹೇಳಿಕೊಂಡಿರುವ ಸಮಂತಾ, ಒಂದು ಫೋಟೋ ಸಹ ಶೇರ್​ ಮಾಡಿಕೊಂಡಿದ್ದಾರೆ. ಡ್ರಿಪ್ಸ್​ ಹಾಕಿಕೊಂಡೇ ಚಿತ್ರದ ಡಬ್ಬಿಂಗ್​ ಮಾಡುತ್ತಿರುವ ಒಂದು ಫೋಟೋ ಹಂಚಿಕೊಂಡಿದ್ದಾರೆ.

ಸಮಂತಾರ ಈ ಆರೋಗ್ಯ ಸ್ಥಿತಿಗೆ ಅತಿಯಾದ ವರ್ಕೌಟ್​ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಜಿಮ್‌ನಲ್ಲಿ ಹೆಚ್ಚು ಸಮಯ ಕೆಳೆಯುವವರು ಹಾಗೂ ಎಂದಿಗೂ ಸಾಮಾನ್ಯ ದೈನಂದಿನ ಕೆಲಸ ಮಾಡದ ಜನರು ಈ ಮೈಯೋಸಿಟಿಸ್‌ನಂತಹ ಆರೋಗ್ಯ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಅಲ್ಲದೆ, ಅಂತರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕಗಳ ಪ್ರಕಾರ ಆಲ್ಕೋಹಾಲ್ ಮತ್ತು ಡ್ರಗ್ಸ್‌ನ ಅತಿಯಾದ ಬಳಕೆಯು ಸಹ ಈ ಸ್ಥಿತಿಗೆ ಕಾರಣವಾಗುತ್ತದೆಯಂತೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಸಮಂತಾ ತುಂಬಾ ವರ್ಕೌಟ್​ ಮಾಡುತ್ತಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳುತ್ತಿದ್ದರು. ಜಿಮ್​ನಲ್ಲಿ ಸಮಂತಾ ಅವರು ತುಂಬಾ ಕಠಿಣವಾದ ಅಭ್ಯಾಸಗಳನ್ನೇ ಮಾಡಿದ್ದಾರೆ. ಅಲ್ಲದೆ, ಹೆಚ್ಚು ಸಮಯ ಜಿಮ್​ನಲ್ಲಿ ಕಳೆಯುತ್ತಿದ್ದರು. ದೇಹವನ್ನು ಫಿಟ್​ ಆಗಿ ಇಡಲು ಅತಿಯಾದ ಜಿಮ್​ ಮಾಡಿದ ಕಾರಣ ಇಂದು ಈ ಆರೋಗ್ಯ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇದೇ ಸಮಯದಲ್ಲಿ ನಾಗಚೈತನ್ಯರೊಂದಿಗಿನ ಡಿವೋರ್ಸ್​ ಕಾರಣದಿಂದಾಗಿ ಸಮಂತಾ ಖಿನ್ನತೆಗೂ ಜಾರಿದ್ದರು ಎನ್ನಲಾಗಿದೆ.

ಯಶೋಧಾ ಸಿನಿಮಾ ಮತ್ತು ವರುಣ್​ ಧವನ್​ ಜೊತೆಗಿನ ವೆಬ್​ ಸರಣಿ ಶೂಟಿಂಗ್​ ಸಮಯದಲ್ಲಿ ಸಾಹಸ ಪ್ರಧಾನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಂತಹ ಸಮಯದಲ್ಲಿ ಸಮಂತಾ ಗಾಯಗೊಂಡ ಬಳಿಕ ಸ್ನಾಯು ನೋವು ಆರಂಭವಾಗಿದೆ ಎಂದು ವೈದ್ಯಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಸಮಂತಾ ಅವರು ಕೆಲವು ಪ್ರಾಜೆಕ್ಟ್‌ಗಳಿಂದ ಹೊರಗುಳಿದ ಕಾರಣ ಅವರಿಗೆ ಚರ್ಮದ ಮೇಲೆ ಗುಳ್ಳೆಗಳು ಬಂದಿರಬಹುದು ಎಂಬ ವದಂತಿಗಳು ಈ ಹಿಂದೆ ಹುಟ್ಟಿಕೊಂಡಿತ್ತು. ಈಗ ಮೈಯೋಸಿಟಿಸ್​ನಿಂದಾಗಿಯೂ ಸಮಂತಾರಲ್ಲಿ ದದ್ದುಗಳು ಉಂಟಾಗಿರಬಹುದು ಎಂದು ಹೇಳಲಾಗಿದೆ. ಹೀಗಾಗಿ ಇತ್ತೀಚೆಗೆ ತನ್ನ ಮುಖ ಕಾಣುವಂತಹ ಯಾವುದೇ ಫೋಟೋಗಳನ್ನು ಸಮಂತಾ ಪೋಸ್ಟ್ ಮಾಡಿಲ್ಲ ಎಂದು ಚರ್ಚೆಯಾಗುತ್ತಿದೆ. ಇದು ಆಕೆಯ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಅದೇನೆ ಇರಲಿ ಸದ್ಯದ ಆರೋಗ್ಯ ಸ್ಥಿತಿಯಿಂದ ಚೇತರಿಸಿಕೊಳ್ಳಲು ಉತ್ತಮವಾದ ವಿಶ್ರಾಂತಿ, ಆಹಾರ ಮತ್ತು ಸಕಾರಾತ್ಮಕ ಆಲೋಚನೆಗಳಂತಹ ಉಪಕ್ರಮಗಳನ್ನು ಅನುಸರಿಸಿ, ಮತ್ತೆ ಗುಣಮುಖರಾಗಿ ಸಮಂತಾ ಕಂಬ್ಯಾಕ್​ ಮಾಡುತ್ತಾರೆ ಎಂಬುದು ಅಭಿಮಾನಿಗಳ ಭರವಸೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net