ಸಲ್ಮಾನ್ ರಾಧೆ ಸಿಹಿಸುದ್ದಿ; ಮೇ 13ಕ್ಕೆ ಓಟಿಟಿ ಮತ್ತು ಥಿಯೇಟರ್​ಗಳಲ್ಲಿ ತೆರೆಗೆ...

Salman Khan
Published on

ಸಲ್ಮಾನ್ ಖಾನ್ ನಟನೆಯ ‘ರಾಧೆ - ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರ ಕಳೆದ ವರ್ಷವೇ ತೆರೆಕಾಣಬೇಕಿತ್ತು. ಆದರೆ, ಕರೊನಾದಿಂದ ಅದು ಸಾಧ್ಯವಾಗಲಿಲ್ಲ. ಎಲ್ಲವೂ ಸರಿಯಾಯಿತು, ಈಗಲಾದರೂ ರಿಲೀಸ್ ಯಾವಾಗ ಎಂದು ಅಭಿಮಾನಿವಲಯ ಕಾಯುತ್ತಲೇ ಇತ್ತು. ಇದೀಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಈಗಾಗಲೇ, ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮೇ 13ಕ್ಕೆ ಏಕಕಾಲದಲ್ಲಿ ಚಿತ್ರಮಂದಿರದ ಜತೆಗೆ ಓಟಿಟಿಯಲ್ಲೂ ‘ರಾಧೆ’ ತೆರೆಗೆ ಬರಲಿದೆ. ಎಲ್ಲೆಡೆ ಕೋವಿಡ್ ಹಾವಳಿ ಹೆಚ್ಚಿರುವುದರಿಂದ ಈಗಾಗಲೇ ಬಿಡುಗಡೆಯಾದ ಚಿತ್ರಗಳೇ ಪ್ರದರ್ಶನದಿಂದ ಹಿಂದೆ ಸರಿಯುತ್ತಿವೆ. ಇಂಥ ಹೊತ್ತಲ್ಲೆ ಸಲ್ಮಾನ್ ಖಾನ್ ಬಿಡುಗಡೆ ಘೋಷಿಸಿಕೊಂಡಿದ್ದು ಸರೀನಾ? ಎಂಬ ಪ್ರಶ್ನೆ ಬರುವುದು ಸಹಜ.

ಇದಕ್ಕೂ ಸ್ವತಃ ಸಲ್ಮಾನ್ ಖಾನ್ ಬಳಿ ಉತ್ತರವಿದೆ. ಮೇ 13ರ ವೇಳೆಗೆ ಕೋವಿಡ್ ಸ್ವಲ್ಪ ತಹಬದಿಗೆ ಬಂದರೆ, ಆಗ ‘ರಾಧೆ’ ಚಿತ್ರವು ಏಕಕಾಲಕ್ಕೆ ಚಿತ್ರಮಂದಿರ ಮತ್ತು ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ, ಆಗ ಚಿತ್ರಮಂದಿರಗಳ ಬದಲು ಜೀ5 ಮತ್ತು ಜೀ ಫ್ಲೆಕ್ಸ್ ಓಟಿಟಿ ವೇದಿಕೆಯಲ್ಲಿ ಅದೇ ದಿನ ಚಿತ್ರ ಪ್ರದರ್ಶನ ಶುರುವಾಗಲಿದೆ. ಪ್ರಭುದೇವ ನಿರ್ದೇಶನದ ಈ ಚಿತ್ರದಲ್ಲಿ ದಿಶಾ ಪಟಾಣಿ ನಾಯಕಿಯಾಗಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net