

ಮುಂಬೈ: ಸಲ್ಮಾನ್ ಕುಟುಂಬದ ಹಲವರು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಸಲ್ಮಾನ್ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೋಹೈಲ್ ಖಾನ್, ತಂಗಿ ಗಂಡ ಆಯುಷ್ಮಾನ್ ಈಗಾಗಲೇ ಚಿತ್ರರಂಗದಲ್ಲಿ ನಟನೆ, ನಿರ್ದೇಶನ ಮತ್ತು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅರ್ಬಾಜ್ ಮಗ ಸಹ ಚಿತ್ರರಂಗಕ್ಕೆ ಸದ್ಯದಲ್ಲೇ ಎಂಟ್ರಿ ಕೊಡುತ್ತಾನೆ ಎಂಬ ಸುದ್ದಿ ಇದೆ.
ಈ ಮಧ್ಯೆ, ಸಲ್ಮಾನ್ ಸೋದರ ಸೊಸೆ ಅಲಿಜೇ ಅಗ್ನಿಹೋತ್ರಿ ಚಿತ್ರರಂಗಕ್ಕೆ ನಟಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಅಲಿಜೇ, ಸಲ್ಮಾನ್ ಅವರ ಸಹೋದರಿ ಅಲ್ವಿರಾ ಖಾನ್ ಮತ್ತು ಅತುಲ್ ಅಗ್ನಿಹೋತ್ರಿ ಅವರ ಮುದ್ದಿನ ಮಗಳು. ಈಗ ಈಕೆ ಕಳೆದ ವರ್ಷ ಬಿಡುಗಡೆಯಾಗಿ ಆಸ್ಕರ್ ಪ್ರಶಸ್ತಿ ತನ್ನದಾಗಿಸಿ 'ಚೈಲ್ಡ್ ಆಫ್ ಡೆಫ್ ಅಡಲ್ಟ್ಸ್' (Child of Deaf Adults - CODA) ಎಂಬ ಹಾಲಿವುಡ್ ಚಿತ್ರದ ಹಿಂದಿ ರೀಮೇಕ್ನಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶನ ಮಾಡುತ್ತಿದ್ದು, ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರವು ಕಿವುಡು-ಮೂಕ ಕುಟುಂಬವೊಂದರ ಸುತ್ತ ಸುತ್ತಲಿದ್ದು, ಆ ಕುಟುಂಬದಲ್ಲಿ ಏಕೈಕ ಮಾತು ಬರುವ, ಕಿವಿ ಕೇಳುವ ಹುಡುಗಿಯಾಗಿ ಅಲಿಜೇ ನಟಿಸುತ್ತಿದ್ದಾರೆ. ಆಕೆ ಏನೆಲ್ಲ ಕಷ್ಟ-ಸುಖಗಳನ್ನು ಅನುಭವಿಸುತ್ತಾಳೆ ಎನ್ನುವುದು ಈ ಚಿತ್ರದ ಕಥೆ.
ಇದನ್ನೂ ಓದಿ: ‘ಲಾಠಿ’ ಹಿಡಿದ ವಿಶಾಲ್; ಬೆಂಗಳೂರಿನಲ್ಲಿ ಪ್ರಚಾರ …
ಇದಲ್ಲದೆ ಸೌಮೇಂದ್ರ ಪಧಿ ನಿರ್ದೇಶನದ ಇನ್ನೊಂದು ಚಿತ್ರದಲ್ಲೂ ಅಲಿಜೇ ನಟಿಸುತ್ತಿರುವ ಸುದ್ದಿ ಇದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಅಲಿಜೇ ತಂದೆ ಅತುಲ್ ಅಗ್ನಿಹೋತ್ರಿ ನಿರ್ಮಾಣ ಮಾಡುತ್ತಿದ್ದಾರೆ.