

ಮುಂಬೈ: ಸಲ್ಮಾನ್ ಖಾನ್ ಸದ್ದಿಲ್ಲದೆ 'ರಾಧೆ - ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ ಚಿತ್ರೀಕರಣವನ್ನು ಮಾಡಿ ಮುಗಿಸಿದ್ದಾರೆ. ಆ ಚಿತ್ರದ ನಂತರ ಅವರು ಯಾವ ಚಿತ್ರದಲ್ಲಿ ನಟಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೀಗ ತೆರೆಬಿದ್ದಿದೆ.
ಇದನ್ನೂ ಓದಿ: ಸಾಯಿಪಲ್ಲವಿ ಬದಲು ರಶ್ಮಿಕಾ
ಅಂದಹಾಗೆ, ಸಲ್ಮಾನ್ ಅವರ ಹೊಸ ಚಿತ್ರವು ಒಂದು ರೀಮೇಕ್ ಎಂಬುದು ಗೊತ್ತಿರಲಿ. ಮರಾಠಿ ಭಾಷೆಯ ಚಿತ್ರವೊಂದನ್ನು ನೋಡಿ ಖುಷಿಪಟ್ಟಿರುವ ಅವರು, ಅದರ ಹಿಂದಿ ರೀಮೇಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಇದೀಗ 'ಅಂತಿಮ್' ಎಂಬ ಹೆಸರನ್ನು ಇಟ್ಟಿದ್ದು, ಹಿರಿಯ ನಿರ್ದೇಶಕ ಮಹೇಶ್ ಮಂಜ್ರೇಕರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇಷ್ಟಕ್ಕೂ ಸಲ್ಮಾನ್ ಅವರಿಗೆ ಇಷ್ಟವಾಗಿರುವ ಆ ಚಿತ್ರ ಯಾವುದು ಎಂಬ ಪ್ರಶ್ನೆ ಸಹಜ. ಅದೇ 'ಮುಲ್ಶಿ ಪ್ಯಾಟರ್ನ್' . 2018ರಲ್ಲಿ ಬಿಡುಗಡೆಯಾದ ಈ ಚಿತ್ರವು ಸಾಕಷ್ಟು ಜನಪ್ರಿಯವಾಗಿತ್ತು. ಈ ಚಿತ್ರವನ್ನು ನೋಡಿ ಮೆಚ್ಚಿದ್ದ ಸಲ್ಮಾನ್, ಚಿತ್ರದಲ್ಲಿ ನಟಿಸುವುದಕ್ಕೂ ಒಪ್ಪಿಕೊಂಡಿದ್ದರು. ಹಾಗೆಯೇ, ಚಿತ್ರಕ್ಕೆ 'ಗನ್ಸ್ ಆಫ್ ನಾರ್ಥ್' ಎಂಬ ಹೆಸರನ್ನು ಇಡಲಾಗಿತ್ತು. ಆದರೆಇ, ಇದೀಗ ಚಿತ್ರದ ಹೆಸರು ಬದಲಾಗಿರುವುದಷ್ಟೇ ಅಲ್ಲ, ಚಿತ್ರದ ನಿರ್ದೇಶಕರು ಸಹ ಬದಲಾಗಿದ್ದಾರೆ. ಮುಂಚೆ ಈ ಚಿತ್ರವನ್ನು ಅಭಿರಾಜ್ ಮಿನಾವಾಲಾ ನಿರ್ದೇಶಿಸಬೇಕಿತ್ತು ಎಂದು ಹೇಳಲಾಗುತ್ತದೆ.
ಹಾಗೆ ನೋಡಿದರೆ, ಈ ಚಿತ್ರದಲ್ಲಿ ವಿಲನ್ ಪಾತ್ರವೇ ಮುಖ್ಯ. ಹೀರೋ ಪಾತ್ರ ಅಷ್ಟೇನೂ ದೊಡ್ಡದಾಗಿರಲಿಲ್ಲ. ಆದರೆ, ಆ ಪಾತ್ರವನ್ನು ಸಾಕಷ್ಟು ಬೆಳೆಸಿ, ಸಲ್ಮಾನ್ ಖಾನ್ಗೆ ಹೊಂದುವಂತೆ ರೂಪಿಸಲಾಗುತ್ತಿದೆ. ಇದೊಂದು ಪೊಲೀಸ್ ಇನ್ಸ್ಪೆಕ್ಟರ್ನ ಪಾತ್ರವಾಗಿದ್ದು, ಮೂಲ ಚಿತ್ರದಲ್ಲಿ ಉಪೇಂದ್ರ ಲಿಮಯೇ ನಟಿಸಿದ್ದರು. ಈಗ ಆ ಪಾತ್ರವನ್ನು ಸಲ್ಮಾನ್ ಮಾಡುತ್ತಿದ್ದಾರೆ. ಸಲ್ಮಾನ್ ಅವರು ಈ ಚಿತ್ರದಲ್ಲಿ ಸಿಖ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ.
ಈ ಚಿತ್ರದ ಚಿತ್ರೀಕರಣವು ನವೆಂಬರ್ನಲ್ಲಿ ಪ್ರಾರಂಭವಾಗಲಿದ್ದು, ಜನವರಿಯಲ್ಲಿ ಮುಕ್ತಾಯವಾಗಲಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಯಲಿದ್ದು, ಚಿತ್ರಕ್ಕೆ ವಿಶೇಷ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗುತ್ತದಂತೆ. ಈಗಾಗಲೇ ಮುಂಬೈನ ಸ್ಟುಡಿಯೋಗಳಲ್ಲಿ ಸೆಟ್ ನಿರ್ಮಾಣದ ಕೆಲಸಗಳು ಆರಂಭವಾಗಿದ್ದು, ಮುಂಬೈ ಮತ್ತು ಕಜ್ರತ್ಗಳಲ್ಲಿ ಚಿತ್ರೀಕರಣ ನಡೆಯಲಿದೆ.