

ಮುಂಬೈ: ಎಸ್ಪಿ ಬಾಲಸುಬ್ರಮಣ್ಯಂ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಇಡೀ ಭಾರತೀಯ ಚಿತ್ರರಂಗ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದೆ. ಚೆನ್ನೈನಲ್ಲಿನ ಎಂಜಿಎಂ ಆಸ್ಪತ್ರೆಗೆ ಈಗಷ್ಟೇ ಕಮಲ್ ಹಾಸನ್ ಭೇಟಿ ನೀಡಿ ಎಸ್ಪಿಬಿ ಸ್ಥಿತಿಗತಿ ವಿಚಾರಿಸಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ನೆಚ್ಚಿನ ಗಾಯಕನ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.
ಸಲ್ಮಾನ್ ಖಾನ್ ಅವರ ಬಹುತೇಕ ಸಿನಿಮಾಗಳಿಗೆ ಎಸ್ಪಿಬಿ ಧ್ವನಿ ನೀಡಿದ್ದಾರೆ. ‘ಬಾಲಸುಬ್ರಮಣ್ಯಂ ಸರ್, ನನ್ನ ಹೃದಯಾಂತರಾಳದಿಂದ ನಿಮ್ಮ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ಆದಷ್ಟು ಬೇಗ ಗುಣಮುಖರಾಗಿ ಬನ್ನಿ. ನನ್ನ ಎಲ್ಲ ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗಿದ್ದಕ್ಕೆ ಧನ್ಯವಾದ. ನಿಮ್ಮ ಪ್ರೀತಿಯ ದಿಲ್ ದಿವಾನಾ ಹೀರೋ ಪ್ರೇಮ್, ಲವ್ ಯೂ ಸರ್..’ ಎಂದು ಟ್ವೀಟ್ ಮಾಡಿದ್ದಾರೆ.
ಎಸ್ಪಿಬಿ ಆಸ್ಪತ್ರೆಗೆ ದಾಖಲಾಗಿ ಒಂದು ತಿಂಗಳ ಮೇಲಾಯಿತು. ಕರೊನಾ ನೆಗೆಟಿವ್ ಬಂದಿದ್ದರೂ ಶ್ವಾಸಕೋಶ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಈ ಮಧ್ಯೆ ಸ್ವಲ್ಪ ಚೇತರಿಸಿಕೊಂಡಿದ್ದ ಗಾಯಕನ ಆರೋಗ್ಯ ಇಂದು ಮತ್ತೆ ಹದಗೆಟ್ಟಿದೆ. ಇತ್ತ ಅಭಿಮಾನಿ ವಲಯದಲ್ಲಿಯೂ ಆತಂಕ ಮನೆ ಮಾಡಿದ್ದು, ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. (ಏಜೆನ್ಸೀಸ್)