

ಕರೊನಾ ಲಾಕ್ಡೌನ್ನಲ್ಲಿ ಸಿಲುಕಿ ಅದಾಗಲೇ ದೇಶಾದ್ಯಂತ ಜನ ಸಮಸ್ಯೆಗೆ ಸಿಲುಕಿದ್ದರೆ, ಅದರ ನಡುವೆಯೇ ಚೀನಾ ಸೈನಿಕರು ಗಡಿಭಾಗದಲ್ಲಿ ಕಿರಿಕ್ ತೆಗೆದಿದ್ದರು. 2020ರ ಜೂನ್ 15ರಂದು ಗಲ್ವಾನ್ನಲ್ಲಿ ಭಾರತದ ಗಡಿಯೊಳಗೆ ಬಂದು ಟೆಂಟ್ ಹಾಕುತ್ತಿದ್ದ ಚೀನಾ ಸೈನಿಕರನ್ನು ಭಾರತದ ಸೈನಿಕರು ಹಿಮ್ಮೆಟ್ಟಿಸಿದ್ದರು. ಆ ಸಂದರ್ಭದಲ್ಲಿ 16 ಬಿಹಾರ್ ರೆಜಿಮೆಂಟ್ನ ಕಮಾಂಡಿಂಗ್ ಆಫೀಸರ್ ಸಂತೋಷ್ ಬಾಬು ಸೇರಿ 20 ಭಾರತೀಯ ಸೈನಿಕರು ವೀರಮರಣವನ್ನಿಪ್ಪಿದ್ದರು. ಹಾಗೇ 40ಕ್ಕೂ ಹೆಚ್ಚು ಚೀನಾ ಸೈನಿಕರನ್ನೂ ಸದೆಬಡಿದಿದ್ದರು.
ಆ ಘಟನೆಗಳ ಕುರಿತು ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೆಲ ತಿಂಗಳಿನಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಅದೀಗ ಟೀಸರ್ ಮೂಲಕ ಪಕ್ಕಾ ಆಗಿದ್ದು, "ಶೂಟೌಟ್ ಅಟ್ ಲೋಖಂಡ್ವಾಲಾ', "ಹಸೀನಾ ಪಾರ್ಕರ್' ಖ್ಯಾತಿಯ ಅಪೂರ್ವ ಲಾಖಿಯಾ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. "ಬ್ಯಾಟಲ್ ಆಫ್ ಗಲ್ವಾನ್' ಎಂದು ಟೈಟಲ್ ಇಡಲಾಗಿದೆ.
ಕಮಾಂಡಿಂಗ್ ಆಫೀಸರ್ ಸಂತೋಷ್ ಬಾಬು ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಸ್ಟ್ ಲುಕ್ ಟೀಸರ್ನಲ್ಲಿ ರಕ್ತಸಿಕ್ತ ಲುಕ್ನಲ್ಲಿ ಕಾಣಿಸಿಕೊಂಡಿರುವ ಅವರು, ಚಿತ್ರದ ಬಗ್ಗೆ ಕುತೂಹಲ, ನಿರೀಕ್ಷೆ ಹೆಚ್ಚಿಸಿದ್ದಾರೆ. ಸಮುದ್ರಮಟ್ಟಕ್ಕಿಂತ 15 ಸಾವಿರ ಅಡಿ ಎತ್ತರದಲ್ಲಿರುವ ಗಲ್ವಾನ್ ಕಣಿವೆಯಲ್ಲೇ ಚಿತ್ರದ ಶೂಟಿಂಗ್ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಹಾಗೇ ಪಾತ್ರಕ್ಕಾಗಿ ಸಲ್ಮಾನ್ ಕೂಡ ತೂಕ ಕಡಿಮೆ ಮಾಡಿಕೊಂಡಿದ್ದಾರೆ.