

‘ಖಾನ್ ಬ್ರದರ್ಸ್ ಶಾರುಖ್, ಸಲ್ಮಾನ್, ಆಮಿರ್ ಒಟ್ಟಾಗಿ ಸಿನಿಮಾ ಮಾಡಬಹುದಲ್ವ!?’ ಎಂಬ ಪ್ರಶ್ನೆ ಸಾಮಾನ್ಯವಾಗಿ ಅವರ ಕೋಟ್ಯಂತರ ಅಭಿಮಾನಿಗಳನ್ನು ಕಾಡಿರದೇ ಇರದು. ಅದಕ್ಕೆ ಇಲ್ಲಿಯವರೆಗೂ ಉತ್ತರ ಸಿಕ್ಕಿರಲಿಲ್ಲ. ಆದರೆ ಮೂವರೂ ಜತೆಯಾಗಿ ಏಕೆ ಸಿನಿಮಾ ಮಾಡುತ್ತಿಲ್ಲ ಎಂಬ ಬಗ್ಗೆ ಖಾನ್ ಬ್ರದರ್ಸ್ನಲ್ಲೊಬ್ಬರು ಕಾರಣ ತಿಳಿಸಿದ್ದಾರೆ.
ಈ ಮೂವರು 30 ವರ್ಷಗಳಿಂದ ತಂತಮ್ಮ ಸಿನಿಮಾಗಳಲ್ಲಿ ಬಿಜಿ ಆಗಿರುವುದರಿಂದ ಒಟ್ಟಿಗೆ ಪರದೆ ಹಂಚಿಕೊಂಡಿಲ್ಲ, ಒಟ್ಟಾಗಿ ಚಿತ್ರ ಮಾಡಲು ಆಸಕ್ತಿಯನ್ನೂ ತೋರಿಸಿಲ್ಲ. ಅಲ್ಲದೆ ಇದಕ್ಕೆ ಹೊರತಾಗಿಯೂ ಇನ್ನೊಂದು ಕಾರಣವಿದೆ. ಅದೇನು ಎಂಬುದನ್ನು ಶಾರುಖ್ ಖಾನ್ ಹೇಳಿದ್ದಾರೆ.
‘ಮೂವರೂ ಒಂದೇ ಸಿನಿಮಾದಲ್ಲಿ ಅಭಿನಯಿಸಬೇಕೆಂದರೆ ಎಲ್ಲರಿಗೂ ಪ್ರಾಶಸ್ಱ ನೀಡುವ ಕಥೆ ಮುಖ್ಯ. ನಿರೀಕ್ಷೆಯಂತೆ ಸಿನಿಮಾಗೆ ದೊಡ್ಡಮಟ್ಟದ ಬಜೆಟ್ ಬೇಕೇಬೇಕು. ನಮ್ಮ ಸಿನಿಮಾಗೆ ಕಡಿಮೆ ಎಂದರೂ 20 ಸಾವಿರ ಸ್ಕ್ರೀನ್ಸ್ ಅನಿವಾರ್ಯ. ಆದರೆ ಈಗ ನಮಗೆ ಐದಾರು ಸಾವಿರ ಚಿತ್ರಮಂದಿರಗಳು ಸಿಗುವುದೂ ಕಷ್ಟ. ಹೀಗಾಗಿ ಒಂದೇ ಸಿನಿಮಾದಲ್ಲಿ ಮೂವರು ಕಾಣಿಸಿಕೊಳ್ಳುವುದು ಸದ್ಯ ಅಸಾಧ್ಯ’ ಎಂದಿದ್ದಾರೆ ಕಿಂಗ್ ಖಾನ್ ಶಾರುಖ್.
ಶಾರುಖ್-ಸಲ್ಮಾನ್ ತಮ್ಮ ಸಿನಿಜರ್ನಿ ಹೊಸತರಲ್ಲಿ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದು ಬಿಟ್ಟರೆ ಆಮಿರ್ ಖಾನ್ ಜತೆ ಇವರಿಬ್ಬರು ನಟಿಸಿದ್ದು ಕಡಿಮೆಯೇ. ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ‘ಅಂದಾಜ್ ಅಪ್ನಾ ಅಪ್ನಾ’ ಚಿತ್ರದಲ್ಲಿ ಪೂರ್ಣಪ್ರಮಾಣದಲ್ಲಿ ಒಟ್ಟಿಗೆ ಅಭಿನಯಿಸಿದ್ದರೆ, ದೀಪಕ್ ತಿಜೋರಿ ನಟನೆಯ ‘ಪೆಹ್ಲಾ ನಶಾ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಷ್ಟೇ ಕಾಣಿಸಿಕೊಂಡಿದ್ದರು. ಆದರೆ ಶಾರುಖ್-ಆಮಿರ್ ಖಾನ್ ಒಟ್ಟಿಗೆ ಪೂರ್ಣಪ್ರಮಾಣದ ಸಿನಿಮಾ ಮಾಡಲು ಕಾಲ ಕೂಡಿಬಂದಿಲ್ಲವಷ್ಟೇ.
ಶಾರುಖ್-ಸಲ್ಮಾನ್ ಜೋಡಿ ಮೋಡಿ: ಖಾನ್ತ್ರಯರ ಪೈಕಿ ಹೆಚ್ಚು ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಸಲ್ಮಾನ್-ಶಾರುಖ್ ಜೋಡಿ. ಅಲ್ಲದೆ, ಆ ಚಿತ್ರಗಳು ಕೋಟಿ ಕೋಟಿ ರೂ. ಕಮಾಯಿ ಕೂಡ ಮಾಡಿವೆ. 1995ರಲ್ಲಿ ‘ಕರನ್ ಅರ್ಜುನ್’, 1996ರಲ್ಲಿ ‘ದುಷ್ಮನ್ ದುನಿಯಾ ಕಾ’, 1998ರಲ್ಲಿ ‘ಕುಚ್ ಕುಚ್ ಹೋತಾ ಹೈ’, 2002ರಲ್ಲಿ ‘ಹಮ್ ತುಮ್ಹಾರಿ ಹೈ ಸನಮ್ ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. 2000ರಲ್ಲಿ ಸಲ್ಮಾನ್ ನಾಯಕನಾಗಿದ್ದ ‘ಹರ್ ದಿಲ್ ಜೋ ಪ್ಯಾರ್ ಕರೇಗಾ’ ಚಿತ್ರದಲ್ಲಿ ಶಾರುಖ್ ಅತಿಥಿ ಪಾತ್ರದಲ್ಲಿ ಬಂದುಹೋಗಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡ ಚಿತ್ರಗಳು ಕಡಿಮೆಯಾದರೂ ಅವುಗಳ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡಿದ್ದಂತೂ ನಿಜ.