ಒಂದೇ ಚಿತ್ರದಲ್ಲಿ ಖಾನ್ ತ್ರಯರು ನಟಿಸಿಲ್ಲವೇಕೆ? ಸಲ್ಮಾನ್​ ಖಾನ್​ ಕೊಟ್ಟ ಅಚ್ಚರಿ ಕಾರಣ ಇಲ್ಲಿದೆ... Salman Khan

Salman Khan
Published on

Salman Khan : ದುಬಾರಿ ಸಂಭಾವನೆಯ ಕಾರಣಕ್ಕೆ ಒಂದೇ ಸಿನಿಮಾದಲ್ಲಿ ಮೂವರು ಖಾನ್‌ಗಳನ್ನು ಒಟ್ಟಿಗೆ ಸೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಹೇಳಿದರು.

ತಮ್ಮ ಮುಂಬರುವ 'ಸಿಕಂದರ್' ಸಿನಿಮಾದ ಬಿಡುಗಡೆಗೂ ಮುನ್ನ ಇತ್ತೀಚೆಗೆ ಮುಂಬೈನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಬಾಲಿವುಡ್​ ಸುಲ್ತಾನ್​, ತಮ್ಮ ಸಮಕಾಲೀನ ನಟರಾದ ಶಾರುಖ್ ಖಾನ್ ಮತ್ತು ಅಮೀರ್​ ಖಾನ್​ ಜತೆ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದರು.

ಎಲ್ಲವೂ ಚಿತ್ರಕಥೆಯನ್ನು ಅವಲಂಬಿಸಿರುತ್ತದೆ. ನಮಗೆ ಅಂತಹ ಸ್ಕ್ರಿಪ್ಟ್ ಸಿಕ್ಕರೆ, ನಾವು ಒಟ್ಟಿಗೆ ಕೆಲಸ ಮಾಡಲು ಬಯಸುತ್ತೇವೆ. ಆದರೆ, ಇಲ್ಲಿಯವರೆಗೆ ಯಾರೊಬ್ಬರು ನಮ್ಮ ಮೂವರಿಗೂ ಒಟ್ಟಿಗೆ ನಟಿಸುವ ಆಫರ್​ ನೀಡಿಲ್ಲ. ಅಲ್ಲದೆ, ನಾವು ಒಟ್ಟಿಗೆ ಬಂದರೆ, ಅದು ದೊಡ್ಡ ಚಿತ್ರವಾಗಲಿದೆ ಮತ್ತು ನಿರ್ದೇಶಕರಿಗೆ ದೊಡ್ಡ ಜವಾಬ್ದಾರಿಯೂ ಆಗಲಿದೆ. ಇದಿಷ್ಟೇ ಅಲ್ಲದೆ, ಚಿತ್ರದ ಬಜೆಟ್ ದೊಡ್ಡದಾಗಿರುತ್ತದೆ. ಆದ್ದರಿಂದ, ಯಾರೂ ನಮ್ಮೊಂದಿಗೆ ಚಿತ್ರ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಲ್ಮಾನ್​ ಖಾನ್​ ಹೇಳಿದರು.

ಅಂದಹಾಗೆ ಸಲ್ಮಾನ್​ ಖಾನ್​ ಅವರು ಈಗಾಗಲೇ ತಮ್ಮ ಮುಂಬರುವ ಪ್ರಾಜೆಕ್ಟ್​ಗಳನ್ನು ಅಂತಿಮಗೊಳಿಸಿದ್ದಾರೆ. ಅಲ್ಲದೆ, ಅವರು ಇನ್ನೂ ಹೆಸರಿಡದ ಅಟ್ಲೀ ನಿರ್ದೇಶನದ ಚಿತ್ರಕ್ಕೆ ಹೊಸ ದಿನಾಂಕವನ್ನು ನಿರ್ಧರಿಸಬೇಕಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವುದು ಕೂಡ ಒಟ್ಟಿಗೆ ಸಿನಿಮಾ ಮಾಡದಿರಲು ಕಾರಣವಾಗಿದೆ ಎಂದು ಸಲ್ಮಾನ್​ ಇದೇ ಸಂದರ್ಭದಲ್ಲಿ ಹೇಳಿದರು. ಭವಿಷ್ಯದಲ್ಲಿ ಸಾಧ್ಯವಾದರೆ ಒಟ್ಟಿಗೆ ನಟಿಸುವುದಾಗಿ ಹೇಳಿದರು.

ಸದ್ಯ ಸಲ್ಮಾನ್ ಖಾನ್ ಅವರು ಎಆರ್ ಮುರುಗದಾಸ್ ನಿರ್ದೇಶನದ ತಮ್ಮ ಮುಂಬರುವ ಚಿತ್ರ ಸಿಕಂದರ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಚಿತ್ರ ಮಾರ್ಚ್ 30, ಭಾನುವಾರದಂದು ಈದ್ ಹಬ್ಬಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net