ರೀಮೇಕ್​ಗಳಿಗೆ ನೋ ಎಂದ ಸಲ್ಮಾನ್​ ... 'ಮಾಸ್ಟರ್​' ಸ್ಕ್ರಿಪ್ಟ್​ ಬದಲಿಸಲು ಸೂಚನೆ

Salman Khan - Final
Published on

ಮುಂಬೈ: ಸಲ್ಮಾನ್​ ಖಾನ್​ ಯಾವಾಗ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಹೇಳುವುದು ಕಷ್ಟ. ಇತ್ತೀಚೆಗಷ್ಟೇ ತಮಿಳಿನ 'ಮಾಸ್ಟರ್​' ಮತ್ತು ತೆಲುಗಿನ 'ಕಿಲಾಡಿ' ಚಿತ್ರಗಳ ಹಿಂದಿ ರೀಮೇಕ್​ಗಳಲ್ಲಿ ಅವರು ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆದರೆ, ಈಗ ಸಲ್ಮಾನ್​ ರೀಮೇಕ್​ ಮಾಡುವುದಕ್ಕೆ ನೋ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ಕಳೆದ ಮೂರು ತಿಂಗಳುಗಳಿಂದ 'ಮಾಸ್ಟರ್​' ಚಿತ್ರವನ್ನು ಹಿಂದಿಯಲ್ಲಿ ರೀಮೇಕ್​ ಮಾಡುವ ಬಗ್ಗೆ ಮತ್ತು ಸಲ್ಮಾನ್​ ಖಾನ್​ ಆ ಚಿತ್ರದಲ್ಲಿ ನಟಿಸುವ ಬಗ್ಗೆ ಸುದ್ದಿ ಬರುತ್ತಲೇ ಇತ್ತು. ಆದರೆ, ಇದೀಗ ಅವರು ಕಥೆಯನ್ನು ಬದಲಾಯಿಸಿ ತನ್ನಿ ಎಂದು ಹೇಳಿದ್ದಾರಂತೆ. ಒಂದು ಪಕ್ಷ ಹೊಸ ಕಥೆ ಏನಾದರೂ ಇಷ್ಟವಾದರೆ, ಆಗ ಮಾತ್ರ ಚಿತ್ರದಲ್ಲಿ ನಟಿಸುವುದಾಗಿ ಅವರು ಹೇಳಿದ್ದಾರಂತೆ.

ಮೂಲಗಳ ಪ್ರಕಾರ, ಸಲ್ಮಾನ್​ಗೆ ನೇರಾನೇರ ರೀಮೇಕ್​ಗಳಲ್ಲಿ ನಟಿಸುವುದಕ್ಕೆ ಸ್ವಲ್ಪವೂ ಇಷ್ಟವಿಲ್ಲವಂತೆ. ಅದಕ್ಕೆ ಪೂರಕವಾಗಿ, 'ಕಿಕ್​' ಚಿತ್ರವನ್ನು ಉದಾಹರಿಸಬಹುದು. ಅದನ್ನು ತೆಲುಗಿನಿಂದ ನೇರವಾಗಿ ಭಟ್ಟಿ ಇಳಿಸದೆ, ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಚಿತ್ರ ಮಾಡಲಾಗಿತ್ತು. ಅದಕ್ಕೆ ಸರಿಯಾಗಿ, ಚಿತ್ರ ಸಹ ಹಿಟ್​ ಆಗಿತ್ತು. ಈಗ ಅದೇ ಫಾರ್ಮುಲಾವನ್ನು 'ಮಾಸ್ಟರ್​'ಗೂ ಅಳವಡಿಸುವುದಕ್ಕೆ ಸಲ್ಮಾನ್​ ಚಿಂತಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖವಾಗಿ, ಸಲ್ಮಾನ್​ಗೆ 'ಮಾಸ್ಟರ್​​' ಚಿತ್ರದಲ್ಲಿ ವಿಜಯ್​ ಪಾತ್ರ ಬಹಳ ಇಷ್ಟವಾಗಿದೆಯಂತೆ. ಸಲ್ಮಾನ್​ ಇದುವರೆಗೂ ಯಾವ ಚಿತ್ರದಲ್ಲೂ ಕುಡುಕ ಮಾಸ್ಟರ್​ ಒಬ್ಬನ ಪಾತ್ರ ಮಾಡಿರಲಿಲ್ಲ. ಹಾಗಾಗಿ, ಆ ಪಾತ್ರ ಮತ್ತು ವ್ಯಕ್ತಿತ್ವವನ್ನು ಇಟ್ಟುಕೊಂಡು, ಬೇರೆ ಕಥೆ ಮಾಡಿಕೊಂಡು ಬನ್ನಿ ಎಂದು ಹೇಳಿದ್ದಾರಂತೆ. ಒಂದು ಪಕ್ಷ ಹೊಸ ಕಥೆ ಇಷ್ಟವಾದರೆ ಮಾತ್ರ ಅವರು ಚಿತ್ರದಲ್ಲಿ ನಟಿಸುವುದಾಗಿ ಷರತ್ತು ಹಾಕಿದ್ದಾರೆ ಎನ್ನುವುದು ಸದ್ಯದ ಸುದ್ದಿ.

ಸದ್ಯ, 'ಅಂತಿಮ್​' ಮತ್ತು 'ಟೈಗರ್​ 3' ಚಿತ್ರಗಳಲ್ಲಿ ನಟಿಸುತ್ತಿರುವ ಸಲ್ಮಾನ್​, ಆ ನಂತರ 'ಭಾಯ್​ಜಾನ್​' ಮತ್ತು 'ಬ್ಲಾಕ್​ ಟೈಗರ್​' ಚಿತ್ರಗಳಲ್ಲಿ ನಟಿಸಲಿದ್ದಾರೆ. ಆ ನಂತರವಷ್ಟೇ, 'ಮಾಸ್ಟರ್​' ಚಿತ್ರವನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net