

ಬೆಂಗಳೂರು: ಕೊನೆಗೂ ಟೈಟಲ್ಗೆ ತಕ್ಕಂತೆ ‘ಸಲಗ, ನಡೆದಿದ್ದೇ ದಾರಿ..’ ಎಂಬಂತಾಗಿದೆ. ಆ ಮೂಲಕ ಒಂದು ಕಡೆ ಅಂದುಕೊಂಡಂತೆ ಆಗದಿದ್ದರೂ, ಮತ್ತೊಂದೆಡೆ ನುಡಿದಂತೆ ನಡೆದಂತಾಗಿದೆ. ಅಂದರೆ ನಿರ್ವಪಕ ಕೆ.ಪಿ. ಶ್ರೀಕಾಂತ್ ನಿರ್ವಣದ, ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಬಹುನಿರೀಕ್ಷಿತ ಅದ್ದೂರಿ ಸಿನಿಮಾ ‘ಸಲಗ’, ಟೈಟಲ್ನಲ್ಲಿನ ‘ನಡೆದಿದ್ದೇ ದಾರಿ’ ಎಂಬ ಟ್ಯಾಗ್ಲೈನ್ಗೆ ತಕ್ಕಂತೆ ತನ್ನದೇ ಹಾದಿಯಲ್ಲಿ ಸಾಗುತ್ತಿದೆ.
ಈ ಮೊದಲು ‘ದುನಿಯಾ’ ಚಿತ್ರದ ಫೀಲಿಂಗ್ನಲ್ಲಿದ್ದ ‘ಸಲಗ’ ಚಿತ್ರತಂಡ ಅದೇ ಜಾಡಿನಲ್ಲಿ ಸಾಗಲು ನಿರ್ಧರಿಸಿ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವೂ ಆಗಿತ್ತು. ಆದರೆ ಕಾರಣಾಂತರಗಳಿಂದ ಅಂದುಕೊಂಡಂತೆ ಆಗಿಲ್ಲ. 2007ರ ಫೆ. 23ರಂದು ತೆರೆ ಕಂಡಿದ್ದ ಸೂರಿ ನಿರ್ದೇಶನದ ‘ದುನಿಯಾ’ ಮೂಲಕ ವಿಜಯ್ ನಾಯಕ ಆಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಆ ಚಿತ್ರದ ಭರ್ಜರಿ ಯಶಸ್ಸು ನಾಯಕ-ನಿರ್ದೇಶಕರ ಬದುಕಿನಲ್ಲಿ ಮಹತ್ವದ ಪಾತ್ರವಹಿಸಿದ್ದರಿಂದ, ನಿರ್ದೇಶಕ ‘ದುನಿಯಾ ಸೂರಿ’ ಹಾಗೂ ನಾಯಕ ‘ದುನಿಯಾ ವಿಜಿ’ ಎಂದೇ ಖ್ಯಾತರಾದರು. ಇನ್ನು ‘ಸಲಗ’ ವಿಜಿ ಅವರ ಪ್ರಪ್ರಥಮ ನಿರ್ದೇಶನದ ಚಿತ್ರವಾಗಿರುವುದರಿಂದ ಮತ್ತು ‘ದುನಿಯಾ’ದಲ್ಲಿ ಸಿಕ್ಕಂಥ ಯಶಸ್ಸು ‘ಸಲಗ’ದಲ್ಲೂ ಸಿಗಬೇಕು ಎಂಬ ಆಶಯದಿಂದ ಕೆಲವೊಂದು ವಿಷಯದಲ್ಲಿ ‘ದುನಿಯಾ’ ಜಾಡಲ್ಲೇ ಸಾಗುವ ಆಶಯ ವಿಜಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಡಬ್ಬಿಂಗ್ ವಿಚಾರದಲ್ಲಿ ‘ದುನಿಯಾ’ ಹಾದಿ ಹಿಡಿದಿದ್ದ ಚಿತ್ರತಂಡ ಸಿನಿಮಾ ಬಿಡುಗಡೆ ವಿಚಾರದಲ್ಲೂ ಅದೇ ದಾರಿಯಲ್ಲೇ ನಡೆಯಲು ಯೋಚಿಸಿತ್ತು. ನಿರ್ವಪಕ ಕೆ.ಪಿ. ಶ್ರೀಕಾಂತ್ ಸಾಮಾನ್ಯವಾಗಿ ತಮ್ಮ ಸಿನಿಮಾಗಳ ಡಬ್ಬಿಂಗ್ ‘ಆಕಾಶ್ ಆಡಿಯೋ’ ಸಂಸ್ಥೆಯಲ್ಲಿ ಮಾಡಿಸುತ್ತಾರೆ. ಆದರೆ ‘ಸಲಗ’ ವಿಚಾರದಲ್ಲಿ ವಿಜಿ ‘ದುನಿಯಾ ಫೀಲ್’ನಲ್ಲಿ ಇದ್ದಿದ್ದರಿಂದ ‘ದುನಿಯಾ’ ಚಿತ್ರದ ಡಬ್ಬಿಂಗ್ ನಡೆದಿದ್ದ ‘ವಿಜಯ ಆಡಿಯೋ’ ಸಂಸ್ಥೆಯಲ್ಲೇ ‘ಸಲಗ’ದ ಡಬ್ಬಿಂಗ್ ಮಾಡಿಸಿದ್ದರು. ಮಾತ್ರವಲ್ಲ, ‘ದುನಿಯಾ’ ಬಿಡುಗಡೆಯಾದಂತೆ ಫೆಬ್ರವರಿ ಕೊನೆಯ ವಾರದಲ್ಲೇ ‘ಸಲಗ’ ತೆರೆಗೆ ತರಬೇಕು ಎಂದು ಯೋಜನೆ ಹಾಕಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗದ್ದರಿಂದ ಅಂದುಕೊಂಡಂತೆ ಆಗಿಲ್ಲ.
‘ಟೈಟಲ್ ಸಾಂಗ್ ಬಹಳ ವಿಶೇಷವಾಗಿ ಚಿತ್ರೀಕರಿಸಬೇಕಾಗಿತ್ತು. ಅದಕ್ಕಾಗಿ ಮಿನರ್ವ ಮಿಲ್ಸ್ ನಲ್ಲಿ 6 ವಿಭಿನ್ನ ಸೆಟ್ಗಳನ್ನು ಹಾಕಿ, ಆರು ದಿನ ಶೂಟಿಂಗ್ ಮಾಡಬೇಕಿತ್ತು. ಆದ್ದರಿಂದ ಟೈಟಲ್ ಸಾಂಗ್ ಶೂಟಿಂಗ್ ಕಳೆದ ವಾರವಷ್ಟೇ ಮುಗಿದಿದೆ. ಹೀಗಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ನಡೆಯುತ್ತಿವೆ. ಅದಕ್ಕೆ 15-20 ದಿನಗಳು ಬೇಕಾದ್ದರಿಂದ ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬೇಕಾಗುತ್ತದೆ’ ಎಂದು ನಿರ್ವಪಕರು ತಿಳಿಸಿದ್ದಾರೆ.