ಎರಡು ಸಾವಿನ ಸೂಚಿ ಸಕೂಚಿ

sakuci feb 20 2020
Published on

‘ಈ ಚಿತ್ರದ ಅರ್ಧ ಶೂಟಿಂಗ್ ಆಗಿದ್ದಾಗ ತಂದೆ ತೀರಿಹೋದರು. ಬಳಿಕ ಮಾವ ಕೂಡ ನಿಧನರಾದರು..’ ಎನ್ನುತ್ತಲೇ ಸಿನಿಮಾಗಾಗಿ ಪಟ್ಟ ನೋವಿನ ಬಗ್ಗೆ ಹೇಳಿಕೊಂಡವರು ‘ಸಕೂಚಿ’ ಚಿತ್ರದ ನಿರ್ದೇಶಕ ಎಸ್. ಅಶೋಕ್.

‘ಸಾವಿನ ಸೂಚಿ’ ಎಂಬ ಅಡಿಬರಹದೊಂದಿಗೆ ಮೂಡಿಬಂದಿರುವ ‘ಸಕೂಚಿ’ ಸಿನಿಮಾದ ಸಂಗೀತ ಬಿಡುಗಡೆ ಇತ್ತೀಚೆಗೆ ನೆರವೇರಿತು. ಅಂದಹಾಗೆ, ‘ಸಕೂಚಿ’ ಎಂದರೇನು ಎಂಬ ಕುತೂಹಲ ಸಹಜ. ‘ಎಂಟು ವರ್ಷಗಳ ಹಿಂದೆ ಕೊಪ್ಪದಲ್ಲಿ ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ ದೊಡ್ಡ ಮರ ಬಿದ್ದಾಗ ಮೊದಲ ಬಾರಿಗೆ ‘ಸಕೂಚಿ’ ಎಂಬ ಶಬ್ದ ಕೇಳಿದ್ದೆ. ನಂತರ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಪಟ್ಟೇಗಾರ್ ಪಾಳ್ಯದಲ್ಲಿ ಮತ್ತೆ ಅದೇ ಪದ ಕೇಳಿದ್ದೆ. ಅದು ಘೋರ ವಾಮಾಚಾರದಲ್ಲಿ ಬಳಸುವ ಪದ’ ಎನ್ನುತ್ತ ಶೀರ್ಷಿಕೆ ಹಿನ್ನೆಲೆ ಹಾಗೂ ಕಥೆಯ ಎಳೆ ಬಿಚ್ಚಿಟ್ಟರು ನಿರ್ದೇಶಕ ಅಶೋಕ್. ‘ಇಲ್ಲಿನ ಪ್ರತಿಪಾತ್ರವೂ ವಿಶಿಷ್ಟವಾಗಿದೆ. ಒಂದು ದೃಶ್ಯದಲ್ಲಿ 40 ಮಂಗಳಮುಖಿಯರನ್ನು ಬಳಸಿಕೊಳ್ಳಲಾಗಿದೆ. ದೃಶ್ಯವೊಂದಕ್ಕಾಗಿ ಸ್ಮಶಾನದಲ್ಲಿ ರಾತ್ರಿ 2ಕ್ಕೆ ಆರಡಿ ಮೂರಡಿ ಜಾಗ ತೋಡುವಾಗ ಮೂಳೆಗಳೆಲ್ಲ ಸಿಕ್ಕಿದ್ದವು..’ ಎಂದು ಶೂಟಿಂಗ್ ಅನುಭವಗಳನ್ನು ಹೇಳಿದರು ನಿರ್ದೇಶಕರು.

‘ಪದ್ಮಾವತಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ತ್ರಿವಿಕ್ರಮ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ‘ನಾನು ಜಿಮ್ ಟ್ರೇನರ್ ಆಗಿದ್ದೆ. ಗೆಳೆಯ ನನ್ನನ್ನು ಹೀರೋ ಮಾಡುತ್ತೇನೆ ಎಂದಾಗ ನಂಬಲಾಗಲಿಲ್ಲ. ಸಿನಿಮಾ ಮಾಡುತ್ತೇವೆ ಎಂದಾಗ ನಾವು ಟೀ ಕುಡಿಯುತ್ತಿದ್ದ ಅಂಗಡಿ ಬಳಿಯಲ್ಲಿ ವ್ಯಂಗ್ಯಕ್ಕೆ ಒಳಗಾಗಿದ್ದೆವು. ಬಳಿಕ ಅದೇ ಅಂಗಡಿ ಬಳಿ ಶೂಟಿಂಗ್ ಮಾಡಿದ್ದೇವೆ. ಇದು ನಾಲ್ಕು ವರ್ಷದ ಕನಸು, ಒಂದೂವರೆ ವರ್ಷದ ಶೂಟಿಂಗ್’ ಎಂದರು ನಾಯಕ ತ್ರಿವಿಕ್ರಮ. ಈ ಚಿತ್ರದ ಮೂಲಕ ರೂಪದರ್ಶಿ ಡಯಾನಾ ಮೇರಿ ನಾಯಕಿ ಆಗಿ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿದ್ದಾರೆ. ‘ಬ್ಲಾ್ಯಕ್ ಮ್ಯಾಜಿಕ್ ಕುರಿತ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಮ್ಯಾಜಿಕ್ ಮಾಡಲಿ’ ಎಂದರು ನಟ ನೀನಾಸಂ ಸತೀಶ್. ‘ಬೀಟ್ ಗುರುಸ್’ ಎಂಬ ತಂಡ ಕಟ್ಟಿಕೊಂಡು ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ಗಣೇಶ್ ಗೋವಿಂದಸ್ವಾಮಿ ಅವರಿಗೆ ಇದು ಮೊದಲ ಸಂಗೀತ ನಿರ್ದೇಶನ. ಪ್ರಮೋದ್ ಶೆಟ್ಟಿ, ಹಿರಿಯ ಚಿತ್ರಸಾಹಿತಿ ಸಿ.ವಿ.ಶಿವಶಂಕರ್, ನಿರ್ವಪಕ ಕೆ.ಮಂಜು, ರಾಜಕಾರಣಿಗಳಾದ ಟಿ.ಎ.ಶರವಣ, ಎನ್.ಆರ್.ರಮೇಶ್, ಉದ್ಯಮಿ ಬೊಮ್ಮನಹಳ್ಳಿ ಬಾಬು ಇತರರು ಆಗಮಿಸಿ ಶುಭಕೋರಿದರು. ಬಿ.ಸಿ. ಅಶ್ವಿನ್ ನಿರ್ವಪಕರಾಗಿದ್ದು, ಮಹಾವೀರ್ ಪ್ರಸಾದ್ ಹಾಗೂ ಜೆ. ಮಧುಕರ್ ಸಹ ನಿರ್ವಪಕರಾಗಿ ಕೈಜೋಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net