

ಬೆಂಗಳೂರು: ಕಥೆಗಳು ಹೇಗೆ ಹೊಳೆಯುತ್ತವೆ ಎಂದು ಹೇಳುವುದು ಕಷ್ಟ. ಒಬ್ಬೊಬ್ಬರಿಗೆ ಒಂದೊಂದು ರೀತಿ ಕಥೆ ಹೊಳೆಯುತ್ತದೆ. ಅಶೋಕ್ ಅವರಿಗೆ ಶಬ್ದದಿಂದ ಒಂದು ಕಥೆ ಹೊಳೆಯಿತಂತೆ. ಆ ಕಥೆಯನ್ನೇ ಇಟ್ಟುಕೊಂಡು ಅವರು ‘ಸಕೂಚಿ’ ಎಂಬ ಸಿನಿಮಾ ಮಾಡಿದ್ದು, ಇತ್ತೀಚೆಗೆ ಟ್ರೇಲರ್ ಸಹ ಬಿಡುಗಡೆಯಾಗಿದೆ.
‘ಸಕೂಚಿ’ ಚಿತ್ರದ ಕಥೆ ಹೊಳೆದಿದ್ದು ಹೇಗೆ ಎಂದು ವಿವರಿಸುವ ಅಶೋಕ್, ‘ನಾನು ಕೆಲವು ವರ್ಷಗಳ ಹಿಂದೆ ಶೃಂಗೇರಿಯಿಂದ ಕೊಪ್ಪಕ್ಕೆ ಪ್ರಯಾಣ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ಒಂದು ರೆಸಾರ್ಟ್ನಲ್ಲಿ ತಂಗಿದ್ದೆ. ರಾತ್ರಿ ತುಂತುರು ಮಳೆಯಾಗುತ್ತಿತ್ತು. ಭಾರೀ ಸಿಡಿಲಿನ ಶಬ್ದಕ್ಕೆ ನೂರಡಿ ಎತ್ತರದ ಮರದ ಕೊಂಬೆ ಮುರಿದು ಬಿತ್ತು. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ವಿಜಯನಗರದಲ್ಲಿ ಮತ್ತೆ ಅದೇ ಶಬ್ದ ಕೇಳಿದೆ. ಈಗಲೂ ಆ ಶಬ್ದ ಕಿವಿಯಲ್ಲೇ ಇದ್ದ ಹಾಗೆ ಇದೆ. ನಂತರ ಅದರ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದೆ. ಆಗ ತಿಳಿಯಿತು ಅದೊಂದು ಪ್ರಯೋಗ ಎಂದು. ಪ್ರೇತಾತ್ಮಗಳನ್ನು ಹಿಡಿದಿಟ್ಟುಕೊಳ್ಳುವ ಒಂದು ಪ್ರಯೋಗ ಈ ಸಕೂಚಿ. ಈ ವಿಷಯವನ್ನಿಟ್ಟುಕೊಂಡು ಚಿತ್ರ ಮಾಡಿದ್ದೇನೆ’ ಎನ್ನುತ್ತಾರೆ. ಈ ಚಿತ್ರದಲ್ಲಿ ತ್ರಿವಿಕ್ರಮ್ ಮತ್ತು ಡಯಾನಾ ನಾಯಕ-ನಾಯಕಿಯಾಗಿದ್ದಾರೆ. ಬಿ.ಸಿ.ಅಶ್ವಿನ್ ಚಿತ್ರ ನಿರ್ಮಾಣ ಮಾಡಿದ್ದಾರೆ.