

ಕಳೆದ ವರ್ಷ ರಿಲೀಸ್ ಆದ ತಮಿಳಿನ "ಅಮರನ್' ಚಿತ್ರದ ಯಶಸ್ಸಿನ ಬೆನ್ನಲ್ಲೇ, ಮಲಯಾಳಂ ನಟಿ ಸಾಯಿ ಪಲ್ಲವಿ ನಟಿಸಿರುವ ತೆಲುಗು ಸಿನಿಮಾ "ತಂಡೇಲ್' ಇದೇ 7ರಂದು ತೆರೆಗೆ ಬರಲು ರೆಡಿಯಾಗಿದೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದ್ದು ಪಲ್ಲವಿ ನಾಗಚೈತನ್ಯಗೆ ನಾಯಕಿಯಾಗಿದ್ದಾರೆ. "ಕಾರ್ತಿಕೇಯ', "ಪ್ರೇಮಂ' ನಿರ್ದೇಶಕ ಚಂದೂ ಮೊಂಡೇಟಿ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರ ತೆಲುಗು ಜತೆಗೆ ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮೂಡಿಬರಲಿದೆ.
ಈಗಾಗಲೇ ಚಿತ್ರದ ತೆಲುಗು ಮತ್ತು ತಮಿಳು ಟ್ರೇಲರ್ ರಿಲೀಸ್ ಆಗಿದ್ದು, ಶುಕ್ರವಾರ ಮುಂಬೈನಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಹಿಂದಿ ಟ್ರೇಲರ್ ಬಿಡುಗಡೆ ಮಾಡಿದರು. ಆದರೆ, ಕಾರ್ಯಕ್ರಮಕ್ಕೆ ನಾಯಕಿ ಸಾಯಿಪಲ್ಲವಿ ಗೈರಾಗಿದ್ದರು. ಈ ಬಗ್ಗೆ ನಿರ್ದೇಶಕ ಚಂದೂ, "ಸಾಯಿ ಪಲ್ಲವಿ ಕಳೆದ ಕೆಲ ದಿನಗಳಿಂದ ಚಿತ್ರದ ಪ್ರಚಾರಕ್ಕಾಗಿ ಬೇರೆ ಬೇರೆ ನಗರಗಳಿಗೆ ಓಡಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರು ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ಹೀಗಾಗಿ ಹಿಂದಿ ಟ್ರೇಲರ್ ಲಾಂಚ್ಗೆ ಅವರು ಬಂದಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ಸಾಯಿ ಪಲ್ಲವಿ ಆಮಿರ್ ಖಾನ್ ಪುತ್ರ ಜುನೈದ್ಗೆ ನಾಯಕಿಯಾಗಿ "ಏಕ್ ದಿನ್' ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದು, ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ "ರಾಮಾಯಣ' ಚಿತ್ರದಲ್ಲೂ ಸೀತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. &ಏಜೆನ್ಸೀಸ್