

‘ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ಮಾಡಿದ್ದೇವೆ ಬನ್ನಿ ನೋಡಿ ಎಂದು ಸಾರಿ ಸಾರಿ ಹೇಳಬೇಕಿದೆ. ಸಕ್ಸಸ್ ಕಂಡವರು ಸಿನಿಮಾ ಬಗ್ಗೆ ಮಾತನಾಡಿದರೆ ಸುದ್ದಿಯಾಗುತ್ತದೆ. ಹಣ ಇದ್ದವರು ಕೇಳಿದರೆ ಸುದ್ದಿ ಆಗುತ್ತದೆ. ಆದರೆ ಒಂದೇ ಒಂದು ಗೆಲುವಿಗಾಗಿ ಹೋರಾಡುತ್ತಿರುವ ನನ್ನಂಥವರು ಬೇಡಿಕೊಳ್ಳುವ ಪರಿಸ್ಥಿತಿ ನಿರ್ವಣವಾಗಿದೆ’ ಎಂದು ನಿರ್ದೇಶಕ ರವಿತೇಜ ಕಣ್ಣೀರಿಟ್ಟರು.
ಸಿನಿಮಾ-ಸೀರಿಯಲ್ಗಳಲ್ಲಿ ಕಲಾವಿದನಾಗಿ ನಟಿಸಿರುವ ರವಿತೇಜ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘ಸಾಗುತ ದೂರ ದೂರ’ ಸಿನಿಮಾದ ಆಡಿಯೋ ಲಾಂಚ್ನಲ್ಲಿ ಈ ಘಟನೆ ನಡೆಯಿತು. ‘ಸಾಗುತ ದೂರ ದೂರ ತಾಯಿ-ಮಗನ ಸೆಂಟಿಮೆಂಟ್ ಇರುವ ಕಥೆ. ನೈಜ ಘಟನೆ ಆಧಾರವಾಗಿ ಇಟ್ಟುಕೊಂಡು ನಾನು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ನನ್ನ ಸಿನಿಮಾ ಜರ್ನಿಯ ಇಷ್ಟು ವರ್ಷಗಳಲ್ಲಿ ಸಿಗದ ಬ್ರೇಕ್ ಈ ಚಿತ್ರದ ಮೂಲಕವಾದರೂ ಸಿಗಲಿ ಎಂಬ ಆಸೆಯಿಂದ ಈ ಕಥೆಯನ್ನು ಸಿನಿಮಾ ಮಾಡಿದ್ದೇನೆ.ಹಾಗಾಗಿ ಎಲ್ಲರ ಪ್ರೋತ್ಸಾಹ ನಮಗೆ ಅಗತ್ಯ’ ಎಂದು ರವಿತೇಜ ಹೇಳಿದರು.
ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ತಮ್ಮ ತಾಯಿಗಾಗಿ ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ತಿಳಿಸಿದರು. ‘ತಾಯಿ ಎನ್ನುವ ಪದಕ್ಕೆ ವರ್ಣನೆ ಅಸಾಧ್ಯ. ಅಂಥ ತಾಯಿ-ಮಗನ ಸೆಂಟಿಮೆಂಟ್ ಈ ಚಿತ್ರದಲ್ಲಿದೆ. ಆ ಕಥೆ ಕೇಳಿದಾಗ ನನಗೆ ನೆನಪಾಗಿದ್ದು ನನ್ನ ತಾಯಿ. ನನ್ನ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ. ಆ ಕಾರಣಕ್ಕಾಗಿಯೇ ಈ ಸಿನಿಮಾ ಮಾಡಿದ್ದೇನೆ. ಅದನ್ನು ನೋಡಿದಾಗ ನಾನು ಹೇಳಿದ ಮಾತು ನಿಮಗೂ ಅರ್ಥವಾಗುತ್ತದೆ’ ಎಂದರು.
ಈ ಚಿತ್ರದ ಟೀಸರ್ ನಟ ಯಶ್ ಬಿಡುಗಡೆ ಮಾಡಿದ್ದರು. ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ರಾಗಿಣಿ ದ್ವಿವೇದಿ ಹಾಗೂ ಲಹರಿ ವೇಲು ಅತಿಥಿಗಳಾಗಿ ಬಂದು ಆಡಿಯೋ ಸಿಡಿ ಬಿಡುಗಡೆಗೊಳಿಸಿದರು. ಮಹೇಶ್ ಚಿತ್ರದ ಪ್ರಮುಖ ಪಾತ್ರಧಾರಿ. ನಾಯಕಿಯರಾಗಿ ಅಪೇಕ್ಷಾ ಪುರೋಹಿತ್, ಜಾಹ್ನವಿ ಜ್ಯೋತಿ ನಟಿಸಿದ್ದಾರೆ. ಹಿರಿಯ ನಟಿ ಉಷಾ ಭಂಡಾರಿ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.
ಮದರ್ ಸೆಂಟಿಮೆಂಟ್ ಇರುವ ಈ ಚಿತ್ರ ಪ್ರೇಮಿಗಳ ದಿನದಂದು ರಿಲೀಸ್ ಆಗುತ್ತಿದೆ. ತಾಯಿ ಪ್ರೀತಿಗೂ ಅದು ಕನೆಕ್ಟ್ ಆಗುತ್ತದೆ. ಹಾಗಾಗಿ ಚಿತ್ರವನ್ನು ಅಂದೇ ತೆರೆಗೆ ತರುತ್ತಿದ್ದೇವೆ. | ಅಮಿತ್ ನಿರ್ಮಾಪಕ