ಇದು ನಕಲಿ ಸಾಧು! ; ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್

Sadhu Kokila 23 March 20
Published on

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ಫೇಕ್ ಅಕೌಂಟ್​ಗಳನ್ನು ತೆರೆದು ಲೈಕ್-ಫಾಲೋವರ್ಸ್​ಗಳನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನ ಸ್ಯಾಂಡಲ್​ವುಡ್​ನಲ್ಲೂ ಹೊಸದೇನಲ್ಲ. ಹೀಗೆ ತೆರೆಯಲ್ಪಡುವ ಫೇಕ್ ಅಕೌಂಟ್​ಗಳ ಅಸಲಿಯತ್ತು ಆಗಾಗ ಬಯಲಾಗುವುದು ಕೂಡ ಹೊಸತಲ್ಲ. ಇದೀಗ ಆ ಸಾಲಿಗೆ ಹೊಸ ಸೇರ್ಪಡೆ, ಹಾಸ್ಯನಟ-ಸಂಗೀತ ನಿರ್ದೇಶಕ ಸಾಧು ಕೋಕಿಲ.

ನಟ ಸಾಧು ಕೋಕಿಲ ಹೆಸರಿನಲ್ಲಿ ಶನಿವಾರ (ಮಾ. 21) ಯಾರೋ ನಕಲಿ ಖಾತೆ ತೆರೆದಿದ್ದು, ಕೆಲವೇ ಕ್ಷಣಗಳಲ್ಲಿ ಅದು ಫೇಕ್ ಎಂಬುದು ಬಹಿರಂಗಗೊಂಡಿದೆ.

ಮಾ.21ರಂದು ಸಾಧು ಕೋಕಿಲ ಎಂಬ ಹೆಸರಿನಲ್ಲಿ ಟ್ವಿಟರ್​ನಲ್ಲಿ ಒಂದು ಖಾತೆ ತೆರೆಯಲ್ಪಟ್ಟಿದ್ದು, ‘ಮೈ ಫಸ್ಟ್ ಟ್ವೀಟ್, ಶನಿವಾರದಂದೇ ನಾನು ಇಲ್ಲಿಗೆ ಕಾಲಿಟ್ಟಿದ್ದೇನೆ. ಆಂಜನೇಯ ಸ್ವಾಮಿ ಎಲ್ಲರಿಗೂ ಒಳ್ಳೆಯದು ಮಾಡಲಿ’ ಎಂದು ಟ್ವೀಟ್ ಮಾಡಲಾಗಿತ್ತು. ಆದರೆ ಅದಾದ ಕೆಲವೇ ಹೊತ್ತಿನಲ್ಲಿ ನಿರ್ದೇಶಕ ರಘುರಾಮ್ ಟ್ವೀಟ್ ಮಾಡಿ, ‘ಗೆಳೆಯರೇ.. ನಾನು ಇದೀಗಷ್ಟೇ ಸಾಧು ಕೋಕಿಲ ಅವರಿಗೆ ನೇರವಾಗಿ ಕರೆ ಮಾಡಿ ಮಾತನಾಡಿದೆ. ಅವರು ತಾವು ಯಾವುದೇ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ಇದು ಫೇಕ್ ಅಕೌಂಟ್..’ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ಕೆಲವೇ ಸಮಯದಲ್ಲಿ ಆ ಖಾತೆ ಅದೇ ಹೆಸರಿನಲ್ಲಿ ಲಭ್ಯ ಇಲ್ಲದಂತಾಗಿತ್ತು.

ನಟಿ ರಚಿತಾ ರಾಮ್ ಹೆಸರಿನಲ್ಲೂ ಟ್ವಿಟರ್​ನಲ್ಲಿ ಒಂದು ಫೇಕ್ ಅಕೌಂಟ್ ಇರುವ ಬಗ್ಗೆ ಅವರೇ ಹೇಳಿಕೊಂಡಿದ್ದರು. ‘ನಾನು ಇನ್​ಸ್ಟಾಗ್ರಾಮ್ಲ್ಲಿ ಮಾತ್ರ ಇದ್ದು, ಬೇರೆ ಯಾವುದೇ ಸೋಷಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿಲ್ಲ’ ಎಂಬುದಾಗಿ ರಚಿತಾ ಈ ಹಿಂದೆ ಸ್ಪಷ್ಟಪಡಿಸಿದ್ದರೂ ಅವರ ಹೆಸರಿನಲ್ಲಿ ಟ್ವೀಟ್​ಗಳು ಬರುತ್ತಲೇ ಇವೆ. ಇನ್ನು ನಟಿ ಸುಮನ್ ರಂಗನಾಥ್ ಕೂಡ, ತಾವು ಯಾವುದೇ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ ಎಂದು ಹೇಳಿಕೊಂಡಿದ್ದರೂ ಅವರ ಹೆಸರಿನಲ್ಲೂ ನಕಲಿ ಖಾತೆ ಕಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net