

ಇಡೀ ವಿಶ್ವವೇ ಕರೊನಾ ಮಹಾಮಾರಿಯ ಭಯದಲ್ಲಿದೆ. ಆದರೆ, ನಿರ್ದೇಶಕ ರಾಜಮೌಳಿಯ ಇನ್ನೂ ಶೀರ್ಷಿಕೆ ಅಂತಿಮವಾಗದ ಆರ್ಆರ್ಆರ್ ಚಿತ್ರತಂಡ ಮಾತ್ರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಹೊತ್ತು ಬಂದಿದೆ.
ಇಲ್ಲಿಯವರೆಗೂ ಕುತೂಹಲವಾಗಿಯೇ ಉಳಿದ ಶೀರ್ಷಿಕೆ ವಿಚಾರವನ್ನು ಹೇಳಿಕೊಳ್ಳಲು ದಿನಾಂಕ ನಿಗದಿ ಪಡಿಸಿದೆ.
ಅಂದರೆ, ಬುಧವಾರ ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಮೋಷನ್ ಪೋಸ್ಟರ್ ಮತ್ತು ಶೀರ್ಷಿಕೆ ಲೋಗೋ ಬಿಡುಗಡೆ ಮಾಡಿಕೊಳ್ಳಲಿದೆ ಆರ್ಆರ್ಆರ್ ಬಳಗ. ಇದೊಂದೆ ಸುದ್ದಿಯನ್ನಷ್ಟೇ ನಿರ್ದೇಶಕ ರಾಜಮೌಳಿ ನೀಡಿಲ್ಲ. ಮೂಲ ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಈ ಮೂಲಕ ಮೊದಲ ಬಾರಿ ರಾಜಮೌಳಿ ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗಿ ತೆರೆಕಾಣಲಿದೆ.
ರಾಮ್ ಚರಣ್ ತೇಜ ಮತ್ತು ಜೂ. ಎನ್ಟಿಆರ್ ಮುಖ್ಯಭೂಮಿಕಯಲ್ಲಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟಿ ಆಲಿಯಾ ಭಟ್ ಸಹ ನಟಿಸುತ್ತಿದ್ದಾರೆ. ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ ಸದ್ಯ ಕರೊನಾ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ. 350 ಕೋಟಿ ಬಜೆಟ್ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ವಿವಿ ದಾನಯ್ಯ ಬಂಡವಾಳ ಹೂಡುತ್ತಿದ್ದಾರೆ.