

ಬೆಂಗಳೂರು: ‘ಗಾನ ಗಾರುಡಿಗ’ ಎಸ್ಪಿ ಬಾಲಸುಬ್ರಮಣ್ಯಂ ಅಗಲಿ ಐದು ತಿಂಗಳಾಗುತ್ತ ಬಂತು. ಇದೀಗ ಅವರನ್ನು ಸ್ಮರಿಸುವ ಕೆಲಸವನ್ನು ಕಲರ್ಸ್ ಕನ್ನಡ ವಾಹಿನಿ ಮಾಡಿದೆ. ‘ಎದೆ ತುಂಬಿ ಹಾಡುವೆನು’ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಎಸ್ಪಿ ಬಾಲಸುಬ್ರಮಣ್ಯಂ ಅವರನ್ನು ನೆನಪು ಮಾಡಿಕೊಂಡಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಚಂದನವನದ ಸಂಗೀತ ನಿರ್ದೇಶಕರು, ಗಾಯಕರು, ಕಲಾವಿದರು ಭಾಗಿಯಾಗಿ ನೆಚ್ಚಿನ ಗಾಯಕನನ್ನು ಸ್ಮರಿಸಿಕೊಂಡಿದ್ದಾರೆ.
‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಕ್ಕೆ ಎಸ್ಪಿಬಿ ಪುತ್ರ ಎಸ್.ಪಿ ಚರಣ್, ಎಸ್ಪಿಬಿ ಸಹೋದರಿ ಶೈಲಜಾ ಮುಖ್ಯ ಅತಿಥಿಗಳಾಗಿ ಆಗಮಿಸಿ, ಅವರ ಹಾಡು, ವ್ಯಕ್ತಿತ್ವ ಎಲ್ಲವನ್ನೂ ನೆನೆದಿದ್ದಾರೆ. ‘ನಾದಬ್ರಹ್ಮ’ ಹಂಸಲೇಖ, ನಟ-ನಿರ್ದೇಶಕ ‘ಕ್ರೇಜಿಸ್ಟಾರ್’ ರವಿಚಂದ್ರನ್, ಎಸ್ಪಿಬಿ ಜತೆಗಿನ ದಿನಗಳನ್ನು ಮೆಲುಕು ಹಾಕಿದರೆ, ಕರ್ನಾಟಕದಲ್ಲಿಯೇ ಹುಟ್ಟಿ ಬನ್ನಿ ಎಂಬ ಹಾಡೊಂದನ್ನು ಸಾಧು ಕೋಕಿಲ ಹಾಡಿದ್ದಾರೆ. ಇನ್ನುಳಿದಂತೆ ನಟರಾದ ರಾಜೇಶ್, ಶ್ರೀನಾಥ್, ದೊಡ್ಡಣ್ಣ, ಅನು ಪ್ರಭಾಕರ್, ಗಿರಿಜಾ ಲೋಕೇಶ್, ರಾಕ್ಲೈನ್ ವೆಂಕಟೇಶ್, ವಿಜಯ್ ರಾಘವೇಂದ್ರ, ಶರಣ್ ಅವರ ಹಾಡುಗಳನ್ನು ಮತ್ತೆ ಮತ್ತೆ ಗುನುಗಿದ್ದಾರೆ. ಎಂ.ಡಿ. ಪಲ್ಲವಿ, ಗುರುಕಿರಣ್, ಸಾಧು ಕೋಕಿಲ, ವ್ಯಾಸರಾಜ್, ಚಿನ್ಮಯ್ ಅತ್ರೇಯ, ಚೇತನ್, ಅರ್ಚನಾ ಉಡುಪ ಹಾಡುಗಳ ಮೂಲಕ ಎಸ್ಪಿಬಿ ಅವರನ್ನು ಸ್ಮರಿಸಿದ್ದಾರೆ. ಸೃಜನ್ ಲೋಕೇಶ್ ನಿರೂಪಣೆ ಮಾಡಿದ್ದು, ಇದೇ 20 ಮತ್ತು 21ರ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.