ನಾರಾಯಣ್ ಎಲ್ಲದಕ್ಕೂ ಎಸ್, ಪ್ರೀತಿಗೆ ಮಾತ್ರ ನೋ; ನಾಲ್ಕು ವರ್ಷಗಳ ಬಳಿಕ ಮತ್ತೆ ಅಭಿನಯ

NARAYAN S
Published on

ಬೆಂಗಳೂರು: ಎಸ್. ನಾರಾಯಣ್ ಇದೀಗ ನೋ ನಾರಾಯಣ್ ಎಂಬಂತಾಗಿದ್ದಾರೆ. ಅರ್ಥಾತ್, ‘ಓಲ್ಡ್ ಮಾಂಕ್’ ಪ್ರಭಾವಕ್ಕೆ ಒಳಗಾಗಿರುವ ಅವರು ಇದೀಗ, ‘ನೋ ವೇ.. ಚಾನ್ಸೇ ಇಲ ..’ ಎನ್ನಲಾರಂಭಿಸಿದ್ದಾರೆ. ಅಂದರೆ, ಎಂ.ಜಿ. ಶ್ರೀನಿವಾಸ್ (ಶ್ರೀನಿ) ನಿರ್ದೇಶನದ ‘ಓಲ್ಡ್ ಮಾಂಕ್’ ಸಿನಿಮಾದಲ್ಲಿ ಎಸ್. ನಾರಾಯಣ್ ಹೀರೋ ತಂದೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

‘ಚಿತ್ರದಲ್ಲಿ ನಾರಾಯಣ್ ಅವರ ಪಾತ್ರದ ಹೆಸರು ಕೂಡ ನಾರಾಯಣ್. ಅವರದ್ದು ಹಿಸ್ಟರಿ ಪ್ರೊಫೆಸರ್ ಪಾತ್ರ. ಎಲ್ಲದಕ್ಕೂ ‘ಎಸ್’ ಎನ್ನುವ ಅವರು, ಪ್ರೀತಿ ಎಂದರೆ ‘ನೋ’ ಎನ್ನುತ್ತಾರೆ. ಇಲ್ಲಿ ನಾಯಕನಿಗೆ ಲವ್ ಮ್ಯಾರೇಜ್ ಆಗುವ ಆಸೆ. ಆದರೆ, ನಾಯಕನ ಅಪ್ಪನಿಗೆ ಮಾತ್ರ ತಮ್ಮ ಮಗ ಅರೇಂಜ್ಡ್ ಮ್ಯಾರೇಜ್ ಆಗಬೇಕೆಂಬ ಆಸೆ. ಅದೇ ಕಾರಣಕ್ಕೆ ಅವರು ಯಾವಾಗಲೂ ಉಪದೇಶ ಮಾಡುತ್ತಿರುತ್ತಾರೆ’ ಎನ್ನುತ್ತ ನಾರಾಯಣ್ ಪಾತ್ರದ ಕುರಿತು ವಿವರಣೆ ಕೊಡುತ್ತಾರೆ ‘ಓಲ್ಡ್ ಮಾಂಕ್’ನಲ್ಲಿ ನಾಯಕನಾಗಿಯೂ ಅಭಿನಯಿಸಿರುವ ನಿರ್ದೇಶಕ ಶ್ರೀನಿ.

ಈ ಮೂಲಕ ನಾಲ್ಕು ವರ್ಷಗಳ ಬಳಿಕ ನಿರ್ದೇಶಕ ಎಸ್. ನಾರಾಯಣ್ ಮತ್ತೆ ನಟನೆಗೆ ಮರಳಿದಂತಾಗಿದೆ ಎನ್ನುತ್ತಾರೆ ಶ್ರೀನಿ. ಇನ್ನು ಚಿತ್ರದ ಬಗ್ಗೆ ಮಾತನಾಡುವ ಅವರು, ‘ನಾರದ ಭೂಲೋಕದಲ್ಲಿ ಮನುಷ್ಯನಾಗಿ ಹುಟ್ಟಿ ಪ್ರೀತಿಗೆ ಹೇಗೆಲ್ಲ ಪರದಾಡುತ್ತಾನೆ ಎಂಬುದೇ ಚಿತ್ರದ ಕಥಾಹಂದರ.

ಹೀರೋಗೆ ನಾರದನಂತೆ ಫಿಟ್ಟಿಂಗ್ ಇಡುವ ಗುಣ ಇರುತ್ತದೆ. ನಾರದ ಒಬ್ಬ ಹಳೇ ಸನ್ಯಾಸಿ ಆಗಿರುವುದರಿಂದ ‘ಓಲ್ಡ್ ಮಾಂಕ್’ ಎಂಬ ಶೀರ್ಷಿಕೆ ಇಡಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಶ್ರೀನಿವಾಸ್. ‘ಸಿದ್ದಿ ಎಂಟರ್​ಪ್ರೖೆಸಸ್’ ಬ್ಯಾನರ್​ನಲ್ಲಿ ನಿರ್ವಣವಾಗುತ್ತಿರುವ ಈ ರೊಮ್ಯಾಂಟಿಕ್-ಕಾಮಿಡಿ ಸಿನಿಮಾದಲ್ಲಿ ಅದಿತಿ ಪ್ರಭುದೇವ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ.

ಚಿತ್ರಕ್ಕೆ ಕಥೆಯನ್ನು ನಿರ್ದೇಶಕರೇ ಬರೆದಿದ್ದು ಅವರೊಂದಿಗೆ ಸಂತೋಷ್ ನಂದಕುಮಾರ್ ಹಾಗೂ ವಿ.ಎಂ. ಪ್ರಸನ್ನ ಕೈಜೋಡಿಸಿದ್ದಾರೆ. ಶ್ರೀಶ ಕೂದವಳ್ಳಿ ಛಾಯಾಗ್ರಹಣ ಹಾಗೂ ಸೌರಭ್ ವೈಭವ್ ಅವರ ಸಂಗೀತ ಈ ಚಿತ್ರಕ್ಕಿರಲಿದೆ. ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ.

ಹೊಸ ಜನರೇಷನ್ ಬಂದಿದ್ದರಿಂದ ಹಾಗೂ ಸರಿಯಾದ ಕಥೆ ಸಿಗದ್ದರಿಂದ ನಟನೆ ಮೂಲಕ ಪರದೆ ಮೇಲೆ ಕಾಣಿಸುವಲ್ಲಿ ಗ್ಯಾಪ್ ಆಗಿತ್ತು. ಶ್ರೀನಿ ಅವರು ಒಂದೊಳ್ಳೆಯ ಕಥೆ ಮಾಡಿದ್ದು, ಪಾತ್ರವೂ ಮಹತ್ವದ್ದಾದ್ದರಿಂದ ಅಭಿನಯಿಸಲು ಒಪ್ಪಿದೆ.

| ಎಸ್.ನಾರಾಯಣ್ ನಟ-ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net