

ಬೆಂಗಳೂರು: ಹಿರಿಯ ನಟಿ ಲೀಲಾವತಿ ನಿನ್ನೆ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಅವರಿಗೆ ಸೊಂಟ ಹಾಗೂ ಕಾಲಿಗೆ ಪೆಟ್ಟಾಗಿದ್ದು, ಒಂದು ತಿಂಗಳು ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಲೀಲಾವತಿಯವರು ಚಿಕಿತ್ಸೆ ಪಡೆದಿದ್ದಾರೆ. ಅಮ್ಮನಿಗೆ ನೋವು ತಡೆಯಲಾಗುತ್ತಿರಲಿಲ್ಲ, ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ. ಅಮ್ಮನನ್ನು ಪರೀಕ್ಷಿಸಿದ ವೈದ್ಯರು ದೊಡ್ಡ ಅಪಾಯವೇನು ಇಲ್ಲ. ಆದರೆ ಬೆನ್ನಿನ ಮೂಳೆಗೆ ಸಣ್ಣ ಗಾಯವಾಗಿದೆ ಎಂದು ತಿಳಿಸಿದ್ದಾರೆ. ಬೆನ್ನಿಗೆ ಬೆಂಬಲವಾಗಿ ಪಟ್ಟಿ ನೀಡಿದ್ದಾರೆ ಎಂದು ವಿನೋದ್ ರಾಜ್ ತಿಳಿಸಿದ್ದಾರೆ.
ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಲೀಲಾವತಿಯವರು ಜಾರಿ ಬಿದ್ದಿದ್ದಾರೆ. ಬಚ್ಚಲು ಮನೆಗೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಬಾಗಿಲನ್ನು ತೆರೆಯಲಾಗದೇ ಅರ್ಧ, ಮೂಕ್ಕಾಲು ಗಂಟೆ ಬಿದ್ದು ನರಳಾಡಿದ್ದಾರೆ. ನಂತರ ಕಷ್ಟಪಟ್ಟು ಬಾಗಿಲು ತೆರೆದು ನಿಧಾನವಾಗಿ ಹೊರ ಬಂದಿದ್ದಾರೆ. ಲೀಲಾವತಿ ಅವರಿಗೆ ಈಗ 83 ವರ್ಷ ವಯಸ್ಸು.