ರುಕ್ಮಿಣಿಗೆ ವಸಂತಕಾಲ; "ಟಾಕ್ಸಿಕ್​' ಮತ್ತು "ಕಾಂತಾರ' ಚಿತ್ರಗಳ ಬಗ್ಗೆ ಮೊದಲ ಬಾರಿ ನಟಿಯ ಮಾತು

ZX
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಬೀರ್​ಬಲ್​' ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ರುಕ್ಮಿಣಿ ವಸಂತ್​, ಬಳಿಕ "ಸಪ್ತಸಾಗರದಾಚೆ ಎಲ್ಲೋ' ಸರಣಿಯ ಮೂಲಕ ರಾಜ್ಯಾದ್ಯಂತ ಮನೆಮಾತಾದರು. ಬಳಿಕ "ಬಾನದಾರಿಯಲ್ಲಿ', "ಬಘೀರ', "ಭೈರತಿ ರಣಗಲ್​' ಚಿತ್ರಗಳಲ್ಲಿ ಮಿಂಚಿದ ರುಕ್ಮಿಣಿ, "ಅಪ್ಪುಡೊ ಇಪ್ಪುಡೊ ಎಪ್ಪುಡೊ' ಮೂಲಕ ತೆಲುಗಿಗೆ, "ಏಸ್​' ಮುಖೇನ ತಮಿಳಿಗೆ ಪದಾರ್ಪಣೆ ಮಾಡಿದರು. ಇದೀಗ ಅವರು ನಟಿಸಿರುವ "ಮದರಾಸಿ' ಪ್ಯಾನ್​ ಇಂಡಿಯಾ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಅದರ ಬೆನ್ನಲ್ಲೇ ಅವರು ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಜಾಗತಿಕ ವೇದಿಕೆ ಸೃಷ್ಟಿಸಿದ ಇಬ್ಬರು ಘಟಾನುಟಿಗಳ ಚಿತ್ರಗಳಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಒಂದು ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ "ಕಾಂತಾರ ಭಾಗ 1' ಮತ್ತು ಇನ್ನೊಂದು ಯಶ್​ ನಟಿಸಿ, ಕೆವಿಎನ್​ ಪ್ರೊಡಕ್ಷನ್​ ಜತೆ ನಿರ್ಮಿಸುತ್ತಿರುವ ಬಹುನಿರೀಕ್ಷಿತ "ಟಾಕ್ಸಿಕ್​'. ಈ ಎರಡು ಪ್ಯಾನ್​ ಇಂಡಿಯಾ, ಪ್ಯಾನ್​ ವರ್ಲ್ಡ್​ ಸಿನಿಮಾಗಳ ತಾರಾಗಣ, ತಂತ್ರಜ್ಞರ ತಂಡ ಬಹುತೇಕ ಬೇರೆ ಇದ್ದರೂ, ನಾಯಕಿ ಒಬ್ಬರೇ, ಅದು ರುಕ್ಮಿಣಿ ವಸಂತ್​.

ಇತ್ತೀಚೆಗಷ್ಟೆ ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡಿರುವ ಅವರು, " "ಟಾಕ್ಸಿಕ್​', "ಕಾಂತಾರ ಭಾಗ 1' ಅಂತಹ ಅದ್ಭುತ ಸಿನಿಮಾಗಳ ಭಾಗವಾಗಿರುವುದು ತುಂಬ ಖುಷಿ ನೀಡಿದೆ. ಹಾಗಂತ ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲೇ ನಟಿಸಬೇಕು ಅಂತೇನು ಮೊದಲೇ ನಿರ್ಧರಿಸಿರಲಿಲ್ಲ. ಆದರೆ, ಉತ್ತಮ ಗುಣಮಟ್ಟದ ಸಿನಿಮಾಗಳ ಮೂಲಕ ಹೆಚ್ಚು ಜನರನ್ನು ರೀಚ್​ ಆಗಬೇಕು ಅಂತ ಆಸೆ ಇತ್ತು. ಅದು ಈ ಚಿತ್ರಗಳ ಮೂಲಕ ನೆರವೇರಿದೆ' ಎನ್ನುತ್ತಾರೆ.

ಜಾಗತಿಕವಾಗಿ ಗುರುತಿಸಿಕೊಳ್ಳುತ್ತಿದ್ದೇವೆ

ಇತ್ತೀಚೆಗೆ ಪರಭಾಷೆಗಳಲ್ಲಿ ನಟಿಸುತ್ತಿದ್ದರೂ, "ಕನ್ನಡದ ಮೇಲೆ ನನಗೆ ಮೊದಲ ಒಲವು' ಎನ್ನುವ ರುಕ್ಮಿಣಿ, ""ಕೆಜಿಎಫ್​', "ಕಾಂತಾರ'ದಂತಹ ದೊಡ್ಡ ಮಟ್ಟದ ಸಿನಿಮಾಗಳು ಬಂದಿವೆ. "ಸನ್​ಫ್ಲವರ್ಸ್​ ವರ್​ ದ ಫಸ್ಟ್​ ಒನ್ಸ್​ ಟು ನೋ' ಅಂತಹ ಕಿರುಚಿತ್ರ ಆಸ್ಕರ್​ ಮಟ್ಟಕ್ಕೂ ಹೋಗಿದೆ. ಹೀಗೆ ಹಲವು ಸಿನಿಮಾಗಳು ಜಾಗತಿಕವಾಗಿ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿವೆ' ಎಂದು ಸಂತಸ ವ್ಯಕ್ತಿಪಡಿಸುತ್ತಾರೆ.

ಯಶ್​, ರಿಷಬ್​ ಅದ್ಭುತ

ರಿಷಬ್​ ಮತ್ತು ಯಶ್​ ಜತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ರುಕ್ಮಿಣಿ, "ಇಬ್ಬರೂ ಪ್ಯಾಷನೇಟ್​, ಕ್ರಿಯೇಟಿವ್​, ಅದ್ಭುತ ಕಲಾವಿದರು. ಕರಿಯರ್​ ಪ್ರಾರಂಭದಲ್ಲೇ ಅವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಅವರ ಉತ್ಸಾಹ ಮತ್ತು ಬದ್ಧತೆ ನೋಡಿ ನಾನೂ ಪ್ರೇರೇಪಣೆ ಪಡೆದಿದ್ದೇನೆ. ಯಶ್​ "ಟಾಕ್ಸಿಕ್​' ಮೂಲಕ ಕೇವಲ ಒಂದು ಸಿನಿಮಾ ಮಾಡುತ್ತಿಲ್ಲ. ಬದಲಾಗಿ ಒಂದು ಸಾಂಸತಿಕ ಯುಗಧರ್ಮದ ಚಳವಳಿಯನ್ನೇ ಪ್ರಾರಂಭಿಸುತ್ತಿದ್ದಾರೆ. ರಿಷಬ್​ ಶೆಟ್ಟಿ "ಕಾಂತಾರ' ಲೋಕವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ವಿಸ್ತರಿಸಿದ್ದಾರೆ. ಊಹಿಸೋಕೂ ಆಗದಷ್ಟು ಭವ್ಯವಾಗಿ ಮೂಡಿಬರುತ್ತಿದ್ದು, ಜಾಗತಿಕವಾಗಿ ಮೂಡಿಬರುತ್ತಿದ್ದರೂ ಸಿನಿಮಾ ನೆಲಮೂಲದ ಸತ್ವವನ್ನೇ ಉಳಿಸಿಕೊಂಡಿದೆ' ಎಂದು ಮಾಹಿತಿ ನೀಡುತ್ತಾರೆ.

ಪರಿಣಾಮ ಬೀರುವ ಪಾತ್ರಗಳು ಬೇಕು

ರುಕ್ಮಿಣಿ ವಸಂತ್​ಗೆ ಜನರ ಮೇಲೆ ಪರಿಣಾಮ ಬೀರುವ, ನೋಡುಗರಿಗೆ ಹೆಚ್ಚು ಕನೆಕ್ಟ್​ ಆಗುವ ಪಾತ್ರಗಳಲ್ಲಿ ನಟಿಸಲು ಇಷ್ಟವಂತೆ. "ಪಾತ್ರ, ಕಥೆ ಭಾವನಾತ್ಮಕವಾಗಿ ಸೆಳೆಯಬೇಕು. ಸಿನಿಮಾ ಎಂಬುದು ಕಲೆ ಮತ್ತು ಉದ್ಯಮ ಎರಡೂ. ಉದ್ಯಮವಿಲ್ಲದೇ ಸಿನಿಮಾ ಇಲ್ಲ. ಹೀಗಾಗಿ ಗಳಿಕೆಯೂ ಮುಖ್ಯ. ಆದರೆ, ಕೆಲವೊಮ್ಮೆ ಸಿನಿಮಾ ಭಾವನಾತ್ಮಕವಾಗಿ ಪ್ರೇಕ್ಷಕರಿಗೆ ಕನೆಕ್ಟ್​ ಆದರೆ, ಅದು 1200 ಕೋಟಿ ರೂ. ಗಳಿಕೆ ಮಾಡಿಕೊಂಡಿತೇ? ಇಲ್ಲವೇ? ಎಂಬುದು ಮುಖ್ಯವಾಗುವುದಿಲ್ಲ' ಎಂದು ಅಭಿಮತ ತಿಳಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net