ಸಪ್ತ ಸಾಗರದಾಚೆ ಎಲ್ಲೋ.. ರಕ್ಷಿತ್ ಶೆಟ್ಟಿ ಜತೆ ರುಕ್ಮಿಣಿ ವಸಂತ್..

Rakshith
Published on

ಬೆಂಗಳೂರು: ‘777 ಚಾರ್ಲಿ’ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ರಕ್ಷಿತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಕೆಲಸಗಳಿಗೆ ಮರುಜೀವ ಸಿಕ್ಕಿದೆ. ಚಿತ್ರವು ಇದೇ ತಿಂಗಳು ಪ್ರಾರಂಭವಾಗಲಿದ್ದು, ಚಿತ್ರತಂಡಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್ ಸೇರ್ಪಡೆಯಾಗಿದ್ದಾರೆ.

ಹೆಸರು ಎಲ್ಲೋ ಕೇಳಿದ ಹಾಗಿದೆ, ಮುಖ ಎಲ್ಲೋ ನೋಡಿದ ಹಾಗಿದೆ ಎಂಬ ಗೊಂದಲ ಬೇಡ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಆರ್​ಜೆ ಶ್ರೀನಿ ಅಭಿನಯದ ಮತ್ತು ನಿರ್ದೇಶನದ ‘ಬೀರಬಲ್’ ಚಿತ್ರದಲ್ಲಿ ರುಕ್ಮಿಣಿ ನಾಯಕಿಯಾಗಿ ನಟಿಸಿದ್ದರು. ಆ ನಂತರ, ಶಶಾಂಕ್ ನಿರ್ದೇಶನದ, ಉಪೇಂದ್ರ ಅಭಿನಯದ ಹೊಸ ಚಿತ್ರದಲ್ಲಿ ರುಕ್ಮಿಣಿ ನಟಿಸಬೇಕಿತ್ತು. ಚಿತ್ರದ ಮುಹೂರ್ತ ಸಹ ಆಗಿತ್ತು. ಆದರೆ, ಈಗ ಚಿತ್ರಕ್ಕೂ ಮುನ್ನ ರಕ್ಷಿತ್ ಸಂಗ ಮಾಡಿದ್ದಾರವರು.

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ವಿವರಿಸುವ ರುಕ್ಮಿಣಿ, ‘ಈ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ ಎಂಬ ವಿಷಯ ಗೊತ್ತಾಯಿತು. ಆಡಿಷನ್ ಕೊಟ್ಟೆ. ಪಾತ್ರಕ್ಕೆ ನಾನು ಸೂಟ್ ಆಗುತ್ತೇನೆ ಎಂದು ಹೇಮಂತ್ ರಾವ್ ನನ್ನನ್ನು ಆಯ್ಕೆ ಮಾಡಿದರು’ ಎನ್ನುತ್ತಾರೆ ರುಕ್ಮಿಣಿ.

ಈ ಚಿತ್ರದಲ್ಲಿ ಗಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ ರುಕ್ಮಿಣಿ. ‘ನನ್ನದು ಗಾಯಕಿ ಪಾತ್ರ. ಹಾಗಂತ ಪ್ರೊಫೆಷನಲ್ ಗಾಯಕಿ ಅಲ್ಲ. ಹವ್ಯಾಸಿ ಗಾಯಕಿಯ ಪಾತ್ರ ಮಾಡುತ್ತಿದ್ದೇನೆ. ಇದೊಂದು ಇಂಟೆನ್ಸ್ ಪ್ರೇಮಕಥೆ ಇರುವ ಚಿತ್ರ. ಪಾತ್ರ ಅದ್ಭುತವಾಗಿದೆ ಮತ್ತು ಅದನ್ನು ಅಷ್ಟೇ ಚೆನ್ನಾಗಿ ನಿರ್ವಹಿಸುವ ಜವಾಬ್ದಾರಿ ಇದೆ. ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ’ ಎಂದು ನಂಬಿಕೆ ವ್ಯಕ್ತಪಡಿಸುತ್ತಾರೆ ರುಕ್ಮಿಣಿ.

ಲಾಕ್​ಡೌನ್ ಸಮಯದಲ್ಲಿ ಏಳೆಂಟು ಕಥೆಗಳನ್ನು ಕೇಳಿದ್ದಾರಂತೆ ಅವರು. ಆ ಪೈಕಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ‘ಒಂದು ಪಾತ್ರದಲ್ಲಿ ಏನು ಬಯಸುತ್ತೀನಿ ಎನ್ನುವುದಕ್ಕಿಂತ ಇನ್​ಸ್ಟಿಂಕ್ಟ್​ನಲ್ಲಿ ನಂಬಿಕೆ ಇಟ್ಟವಳು ನಾನು. ಒಂದು ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎಂದು ನೋಡುತ್ತೇನೆ. ಇಷ್ಟವಾದರೆ ತಕ್ಷಣ ಒಪು್ಪತ್ತೇನೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net