

ಕರೊನಾ ಮೂರನೆಯ ಅಲೆಯಿಂದಾಗಿ, ಜ. 7ಕ್ಕೆ ಬಿಡುಗಡೆಯಾಗಬೇಕಿದ್ದ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರವು ಅನಾಮತ್ತಾಗಿ ಮುಂದಕ್ಕೆ ಹೋಗಿದೆ. ಮುಂದೆ ಯಾವಾಗ ಬಿಡುಗಡೆ ಎಂದು ಚಿತ್ರತಂಡ ಇನ್ನೂ ತೀರ್ವನಿಸಿಲ್ಲ. ಈ ಬಾರಿ, ಚಿತ್ರ ಮುಂದೂಡಿದ್ದರಿಂದ 20 ಕೋಟಿ ರೂ.ಗಳನ್ನು ಚಿತ್ರತಂಡ ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಹೌದು, ಕಳೆದ ಒಂದು ತಿಂಗಳಿನಿಂದ ಚಿತ್ರತಂಡದವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಲವು ನಗರಗಳಿಗೆ ಭೇಟಿ ಕೊಟ್ಟು ಚಿತ್ರದ ಪ್ರಮೋಷನ್ ಮಾಡಿದ್ದಾರೆ. ಹೈದರಾಬಾದ್ ಅಲ್ಲದೆ ಬೆಂಗಳೂರು, ಚೆನ್ನೈ, ಮುಂಬೈ, ತಿರುವನಂತಪುರಂ ... ಹೀಗೆ ಹಲವು ಕಡೆ ಭೇಟಿ ನೀಡಿದ್ದಾರೆ. ಬೆಂಗಳೂರಲ್ಲೇ ಚಿತ್ರತಂಡ ಎರಡು ಬಾರಿ ಪ್ರಚಾರ ಮಾಡಿದ್ದು, ಮೂರನೆಯ ಪ್ರೀ-ರಿಲೀಸ್ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಇದೆಲ್ಲದರಿಂದ 20 ಕೋಟಿ ರೂ.ವರೆಗೂ ನಷ್ಟವಾಗಿದೆಯಂತೆ.
ಮೂಲಗಳ ಪ್ರಕಾರ, ಜೂ.ಎನ್ಟಿಆರ್ ಮತ್ತು ರಾಮ್ರಣ್ ತೇಜ ಅವರ ಅಭಿಮಾನಿಗಳು ಸಹ ಚಿತ್ರತಂಡದವರ ಜತೆಗೆ ಪ್ರಯಾಣ ಮಾಡುತ್ತಿದ್ದರಂತೆ. ಆಂಧ್ರ ಮತ್ತು ತೆಲಂಗಾಣ ಹೊರಗೆ ಇಬ್ಬರೂ ನಟರಿಗೆ ಹೆಚ್ಚು ಅಭಿಮಾನಿಗಳು ಇಲ್ಲದ ಕಾರಣ, ಹೈದರಾಬಾದ್ನಿಂದಲೇ ಹಲವು ಅಭಿಮಾನಿಗಳನ್ನು ಕರೆದುಕೊಂಡು ಹೋಗಲಾಗುತ್ತಿತ್ತಂತೆ. ಅವರೆಲ್ಲರೂ ತಮ್ಮ ನೆಚ್ಚಿನ ನಟರು ವೇದಿಕೆಗೆ ಬಂದ ಸಂದರ್ಭದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರಂತೆ. ಅವರ ಪ್ರಯಾಣ, ಹೋಟೆಲ್ ವೆಚ್ಚ ಎಲ್ಲವೂ ಸೇರಿ ಅಷ್ಟಾಗಿದೆ ಎಂದು ಹೇಳಲಾಗುತ್ತಿದೆ.
10 ಕೋಟಿ ರೂ ವಾಪಾಸು: ಇನ್ನು, ‘ಆರ್ಆರ್ಆರ್’ ಚಿತ್ರದ ಬಿಡುಗಡೆಗೆ ಒಂದು ವಾರದ ಮುಂಚೆಯೇ ಮುಂಗಡ ಬುಕ್ಕಿಂಗ್ ಶುರುವಾಗಿತ್ತು. 10 ಕೋಟಿ ರೂ. ಮೌಲ್ಯದ ಟಿಕೆಟ್ಗಳನ್ನು ಜನ ಆಗಲೇ ಕಾದಿರಿಸಿದ್ದರು. ಆದರೆ, ಇದೀಗ ಚಿತ್ರ ಮುಂದಕ್ಕೆ ಹೋಗಿರುವುದರಿಂದ, ಅಷ್ಟನ್ನೂ ವಿತರಕರು ಮತ್ತು ಪ್ರದರ್ಶಕರು ಹಿಂದಿರುಗಿಸುವ ಪರಿಸ್ಥಿತಿ ಬಂದಿದೆ. -ಏಜೆನ್ಸೀಸ್