

ಬೆಂಗಳೂರು: ಸದಭಿರುಚಿಯ ಸಿನಿಮಾಗಳ ಮೂಲಕ ತುಳು ಚಿತ್ರರಂಗ ಕೂಡ ಗಮನ ಸೆಳೆಯುತ್ತಿದ್ದು, ಕನ್ನಡ ಚಿತ್ರರಂಗದ ಜತೆ ಜತೆಗೆ ಹೆಜ್ಜೆ ಹಾಕುತ್ತಿದೆ. ಇತ್ತೀಚೆಗೆ ತುಳು ಸಿನಿಮಾಗಳು ಕೂಡ ಕನ್ನಡಕ್ಕೆ ಡಬ್ ಆಗುತ್ತಿರುವುದು ವಿಶೇಷ. ‘ದಸ್ಕತ್’ ಮೊದಲು ತುಳುವಿನಲ್ಲಿ ತೆರೆಕಂಡು ಬಳಿಕ ಕನ್ನಡಕ್ಕೆ ಡಬ್ ಆಗಿತ್ತು. ಇದರ ಬೆನ್ನಲ್ಲೇ ‘ಜೈ’ ಏಕಕಾಲದಲ್ಲಿ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಮೂಡಿಬರುತ್ತಿದೆ. ‘ಬಿಗ್‌ಬಾಸ್ ಕನ್ನಡ ಸೀಸನ್ 9’ರ ಖ್ಯಾತಿಯ ನಟ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರವಿದು. ‘ಪೈಲ್ವಾನ್’ ಬಳಿಕ ಬಾಲಿವುಡ್ ನಟ ಸುನೀಲ್ ಶೆಟ್ಟಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ ಬಿಡುಗಡೆಗೆ ಸಿದ್ಧವಾಗಿದ್ದು, ಇತ್ತೀಚೆಗೆ ನಟ ಶ್ರೀಮುರಳಿ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು.
ರೂಪೇಶ್ ಶೆಟ್ಟಿ, ‘‘ಗಿರ್ಗಿಟ್’, ‘ಸರ್ಕಸ್’ ಬಳಿಕ ನಾನು ನಿರ್ದೇಶಿಸುತ್ತಿರುವ ಮೂರನೇ ಚಿತ್ರವಿದು. ಕರಾವಳಿ ಭಾಗದ ರಾಜಕೀಯ ಹಿನ್ನೆಲೆಯ ಸಿನಿಮಾ. ತುಳು ಮೇಲಿನ ಅಭಿಮಾನದಿಂದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಒಂದು ರೂಪಾಯಿ ಸಂಭಾವನೆ ಪಡೆಯದೇ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ 18 ನಿಮಿಷಗಳ ಕಾಲ ಅವರ ಪಾತ್ರ ಇರುತ್ತದೆ. ನ.14ಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಇದೆ’ ಎಂದು ಮಾಹಿತಿ ಹಂಚಿಕೊಂಡರು. ಇಲ್ಲಿ ರೂಪೇಶ್‌ಗೆ ಅದ್ವಿತಿ ಶೆಟ್ಟಿ ಜೋಡಿಯಾಗಿದ್ದಾರೆ. ‘ಅಪ್ಪನಿಗೆ ನಾನು ತುಳು ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇತ್ತು. ಈಗ ನನ್ನ ಮೊದಲ ಸಿನಿಮಾ ಸಿದ್ಧವಾಗಿದ್ದು, ಇಲ್ಲಿ ನಾನು ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ’ ಎಂದು ಖುಷಿ ಹಂಚಿಕೊಂಡರು. ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು ಕಲಾ ಬಳಗದಲ್ಲಿದ್ದಾರೆ. ವಿನುತ್ ಛಾಯಾಗ್ರಹಣ, ಲಾಯ್ ವ್ಯಾಲೆಂಟೀನ್ ಸಲ್ದಾನ್ಹಾ ಸಂಗೀತ, ರಾಹುಲ್ ವಸಿಷ್ಠ ಸಂಕಲನ ಚಿತ್ರಕ್ಕಿರಲಿದೆ.