

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಬಿಗ್ಬಾಸ್ ಕನ್ನಡ ಸೀಸನ್ 9ರಲ್ಲಿ ಗೆದ್ದು ಬೀಗಿದ್ದ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸಿನಿಮಾ "ಜೈ'. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ರೂಪೇಶ್ಗೆ ಅದ್ವಿತಿ ಶೆಟ್ಟಿ ನಾಯಕಿಯಾಗಿದ್ದಾರೆ. ಜತೆಗೆ "ಪೈಲ್ವಾನ್' ಬಳಿಕ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮತ್ತೆ ಕನ್ನಡಕ್ಕೆ ವಾಪಸ್ಸಾಗಿರುವ ಕಾರಣ "ಜೈ' ಬಗ್ಗೆ ನಿರೀೆ ಗರಿಗೆದರಿದೆ. ಇದೇ ತಿಂಗಳ 14ರಂದು ಸಿನಿಮಾ ತೆರೆಗೆ ಬರಲಿದ್ದು, ಇತ್ತೀಚೆಗಷ್ಟೆ ಟ್ರೇಲರ್ ಬಿಡುಗಡೆ ಮಾಡಲಾಯಿತು.
ನಾಯಕ, ನಿರ್ದೇಶಕ ರೂಪೇಶ್ ಶೆಟ್ಟಿ, "ಇವತ್ತು ತುಂಬ ಖುಷಿಯ ದಿನ. ತುಳುವಿನಲ್ಲಿ ಸಣ್ಣದಾಗಿ ಮಾಡಬೇಕೆಂದು ಪ್ರಾರಂಭಿಸಿದ ಚಿತ್ರವಿದು. ಆದರೆ, ವಿದೇಶದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ತುಳು ಚಿತ್ರ ಇದೀಗ ಕನ್ನಡ ಮತ್ತು ತುಳು ಎರಡೂ ಭಾಷೆಗಳ ಸಿನಿಮಾ ಆಗಿ ಬದಲಾಗಿದೆ. ಅದಕ್ಕೆ ಕಾರಣ ಸುನೀಲ್ ಶೆಟ್ಟಿ. ಅವರಿಗೆ ನಾವ್ಯಾರು ಅಂತನೇ ಗೊತ್ತಿರಲಿಲ್ಲ. ನಿರ್ಮಾಪಕರ ಮೂಲಕ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡೆವು. ಒಪ್ಪಿ ನಮ್ಮ ಚಿತ್ರದಲ್ಲಿ ನಟಿಸಿದರು. ಸಿನಿಮಾ ಪೂರ್ಣಗೊಂಡ ಬಳಿಕ ಅವರು ಹೋಗಿಬಿಡಬಹುದಿತ್ತು. ಆದರೆ, ಪ್ರಚಾರಕ್ಕೂ ನಮ್ಮ ಜತೆ ನಿಂತಿದ್ದಾರೆ. ರಿಲೀಸ್ ಸಮಯದಲ್ಲೂ ಬರುವುದಾಗಿ ಹೇಳಿದ್ದಾರೆ' ಎಂದು ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ, ನಿರೂಪಕಿ ಅನುಶ್ರೀ, ಉಪೇಂದ್ರ ಶೆಟ್ಟಿ, ಮಧು ರಾವ್, ರಾಜ್ ದೀಪಕ್ ಶೆಟ್ಟಿ, ಪ್ರಕಾಶ್ ಕುಮ್ಕಳ ಹಾಜರಿದ್ದರು.
ನಟ ಸುನೀಲ್ ಶೆಟ್ಟಿ, "ನಾನು ಕರ್ನಾಟಕದವನು. ನನ್ನ ಸಹೋದರಿ ಸೇರಿ ಹಲವು ಸಂಬಂಧಿಕರು ಇರುವ ಕಾರಣ ಬೆಂಗಳೂರಿಗೆ ಆಗಾಗ ಬರುತ್ತಿರುತ್ತೇನೆ. ಇಲ್ಲಿನ ಹಲವು ನೆನಪುಗಳಿವೆ. ಡಾ. ರಾಜಕುಮಾರ್, ಪುನೀತ್ ನನಗೆ ತುಂಬ ಕ್ಲೋಸ್ ಇದದ್ರು. ಕಿಚ್ಚ ಸುದೀಪ್ ಕೂಡ ನನಗೆ ಆತ್ಮೀಯ. ಮುಂಬೈನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಅದು ನನ್ನ ಕರ್ಮಭೂಮಿ. ಆದರೆ, ನನ್ನ ಜನ್ಮಭೂಮಿ ಕರ್ನಾಟಕದ ಮುಲ್ಕಿ' ಎಂದರು.