ಯಶ್​ ಈ ಕೆಲಸ ಮಾಡಲು 1975 ದಿನ ಕಾದ ಅಭಿಮಾನಿಗಳು!

Toxic Muhurtha (3)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಕೆಜಿಎ್​ ಚಾಪ್ಟರ್​ 2' ಬಳಿಕ ನಟ ಯಶ್​ ಮತ್ತೆ ಬೇರೆ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ವಿಶೇಷ ಅಂದರೆ "ಕೆಜಿಎ್​ 2' ಮುಹೂರ್ತ ಆಚರಿಸಿಕೊಂಡಿದ್ದು 2019ರ ಮಾ. 13ರಂದು. ರಿಲೀಸ್​ ಆಗಿದ್ದು 2022ರ ಏ. 14ರಂದು. ಇದೀಗ ಬರೋಬ್ಬರಿ 1975 ದಿನಗಳ ನಂತರ ಅರ್ಥಾತ್​ ಐದೂವರೆ ವರ್ಷಗಳ ಬಳಿಕ ಯಶ್​ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಕೆವಿಎನ್​ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ "ಟಾಕ್ಸಿಕ್​' ಚಿತ್ರ ಕಳೆದ ವರ್ಷ ಡಿ. 8ರಂದು ಘೋಷಣೆಯಾಗಿತ್ತು. ಅದಾಗಿ ಎಂಟು ತಿಂಗಳ ನಂತರ ಅರ್ಥಾತ್​ ಗುರುವಾರ (ಆ.8) ಚಿತ್ರದ ಮುಹೂರ್ತ ನೆರವೇರಿಸಲಾಗಿದೆ. ಅದಕ್ಕೂ ಮುನ್ನ ಯಶ್​, ಸುರ್ಯ ಸದಾಶಿವ ರುದ್ರ ದೇವಸ್ಥಾನ ಮತ್ತು ಧರ್ಮಸ್ಥಳಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಇದು ಯಶ್​ ಅಭಿನಯದ 19ನೇ ಚಿತ್ರವಾಗಿದ್ದು, ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ "ಟಾಕ್ಸಿಕ್​' ಚಿತ್ರವನ್ನು 2025ರ ಏ. 10ರಂದು ರಿಲೀಸ್​ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಅರ್ಥಾತ್​ ಇನ್ನು ಕೇವಲ ಎಂಟು ತಿಂಗಳಲ್ಲಿ ಚಿತ್ರದ ಶೂಟಿಂಗ್​ ಪೂರ್ಣಗೊಳಿಸಿ, ಪೋಸ್ಟ್​&ಪ್ರೊಡಕ್ಷನ್​ ಮುಗಿಸಿ, ಸೆನ್ಸಾರ್​ ಮಾಡಿಸಿ, ತೆರೆಗೆ ತರುವ ಸವಾಲು ನಿರ್ದೇಶಕಿ ಗೀತು ಮೋಹನ್​ದಾಸ್​ ಮತ್ತು ತಂಡದ ಮುಂದಿದೆ. ಅದಕ್ಕೆ ತಕ್ಕಂತೆ ಪ್ರಿ&ಪ್ರೊಡಕ್ಷನ್​ ಹಂತದಲ್ಲಿಯೇ ಚಿತ್ರತಂಡ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.

ಕ್ಲ್ಯಾಪ್​ ಮಾಡಿದ್ದು ಸೆಟ್​ಬಾಯ್​
ಎಚ್​ಎಂಟಿ ಫ್ಯಾಕ್ಟರಿಯಲ್ಲಿ "ಟಾಕ್ಸಿಕ್​' ಸೆಟ್​ ಹಾಕಲಾಗಿದ್ದು, ಗುರುವಾರದ ಬ್ರಾಹ್ಮೀ ಮುಹೂರ್ತದಲ್ಲಿ ಚಿತ್ರತಂಡ ಪೂಜೆ ನೆರವೇರಿಸಿದೆ. ಈ ಸಂದರ್ಭದಲ್ಲಿ "ಟಾಕ್ಸಿಕ್​' ನಾಯಕ ನಟ ಯಶ್​, ನಿರ್ಮಾಪಕ ಕೆ. ವೆಂಕಟ್​ ನಾರಾಯಣ್​, ನಿರ್ದೇಶಕಿ ಗೀತು ಮೋಹನ್​ದಾಸ್​ ಸೇರಿ ಇಡೀ ಚಿತ್ರತಂಡ ಭಾಗವಹಿಸಿದೆ. ವಿಶೇಷ ಅಂದರೆ ಸೆಟ್​ಬಾಯ್​ ಸುನಿಲ್​ ಪ್ಯಾನ್​ ವರ್ಲ್ಡ್​ "ಟಾಕ್ಸಿಕ್​' ಮೊದಲ ದೃಶ್ಯಕ್ಕೆ ಕ್ಲ್ಯಾಪ್​ ಮಾಡಿದ್ದಾರೆ. ಆ ಮೂಲಕ ಚಿತ್ರರಂಗದ ಕಾರ್ಮಿಕರು ಮತ್ತು ತಂತ್ರಜ್ಞರ ಮೇಲಿರುವ ಗೌರವವನ್ನು ಚಿತ್ರತಂಡ ತೋರಿದೆ. ಮುಹೂರ್ತದ ಬಳಿಕ ಗುರುವಾರದಿಂದಲೇ ಶೂಟಿಂಗ್​ ಸಹ ಪ್ರಾರಂಭಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net