

ಮುಂಬೈ: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ ಹಾಗೂ ನೆಚ್ಚಿನ ಪೋಷಕ ಕಲಾವಿದರ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಅಥವಾ ಕಲಾವಿದರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ನಟ ಯಶ್ ಬಗ್ಗೆ ಕನ್ನಡಿಗರಿಗೆ ಹೇಳುವ ಅಗತ್ಯವೇ ಇಲ್ಲ. ಅವರ ಪ್ರತಿಯೊಂದು ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಯಶ್ ಅವರ ಸಿನಿ ಜೀವನದಲ್ಲಿ ಮಹತ್ವದ ತಿರುವು ಕೊಟ್ಟ ಸಿನಿಮಾಗಳಲ್ಲಿ ಕಿರಾತಕ ಸಿನಿಮಾ ಪ್ರಮುಖ ಪಾತ್ರವಹಿಸುತ್ತದೆ. ಇದು ತಮಿಳಿನ ಕಲಾವಾಣಿ ಸಿನಿಮಾದ ರಿಮೇಕ್ ಆದರೂ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿತು. ಯಶ್ಗೆ ಉತ್ತಮ ಖ್ಯಾತಿ ತಂದುಕೊಟ್ಟಿತು. ಯಶ್ಗೆ ಮಾತ್ರವಲ್ಲದೆ, ಹಾಸ್ಯ ನಟ ಚಿಕ್ಕಣ್ಣ ಅವರ ಸಿನಿ ಬದುಕಿಗೆ ಮಹತ್ತರ ತಿರುವು ನೀಡಿತು.
ಈ ಸಿನಿಮಾದಲ್ಲಿ ಯಶ್ ತಂಗಿ ಪಾತ್ರ ನಿಮಗೆ ನೆನಪಿರಬಹುದು. ಕೆಲವು ದೃಶ್ಯಗಳಲ್ಲಿ ಬಂದು ಹೋಗುವ ಈ ಪಾತ್ರ ನೋಡುಗರ ಮನಸ್ಸನ್ನು ಸೆಳೆಯುತ್ತದೆ. ರಾಜಿ ಹೆಸರಿನ ಪಾತ್ರ ನಟಿಸಿದ್ದ ಬೇಬಿ ಅರ್ಪಿತಾ ಬಹುತೇಕರಿಗೆ ತಿಳಿದಿಲ್ಲ. ಇವರ ಪೂರ್ಣ ಹೆಸರು ಅರ್ಪಿತಾ ದೇವರಾಜ್. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅರ್ಪಿತಾ ಅವರ ರೀಲ್ಸ್ ವೈರಲ್ ಆಗುತ್ತಿದ್ದು, ಆಕೆಯನ್ನು ನೋಡಿದ ನೆಟ್ಟಿಗರು ನೀವು ಕಿರಾತಕ ಸಿನಿಮಾದಲ್ಲಿ ಯಶ್ ತಂಗಿಯಾಗಿ ನಟಿಸಿದ್ರಿ ಅಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ.
ಅರ್ಪಿತಾ ದೇವರಾಜ್ ತನ್ನ ಇನ್ಸ್ಟಾಗ್ರಾಂ ಪ್ರೊಫೈಲ್ನಲ್ಲಿ ಕಲಾವಿದೆ, ಹೆಮ್ಮೆಯ ಭಾರತೀಯ, ಮ್ಯೂಸಿಕ್, ವೀಣೆ ಮತ್ತು ಡಾನ್ಸ್ ಲವರ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ತಾನೋರ್ವ ಪ್ರಾಣಿ ಪ್ರಿಯೆ ಎಂದು ಹೇಳಿದ್ದಾರೆ. ಸದ್ಯ ಅರ್ಪಿತಾ ಅವರ ರಿಲ್ಸ್ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ವಿಡಿಯೋ ನೋಡಿದವರು ಕಿರಾತಕ ಸಿನಿಮಾದಲ್ಲಿ ಯಶ್ ತಂಗಿ ಪಾತ್ರ ಮಾಡಿದ್ದ ನೀವು ತುಂಬಾ ಬದಲಾಗಿದ್ದೀರಿ. ನಮ್ಮ ಕಣ್ಣನ್ನು ನಂಬೋಕೆ ಆಗುತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಅರ್ಪಿತಾ ದೇವರಾಜ್ ಅವರು ಇನ್ಸ್ಟಾಗ್ರಾಂನಲ್ಲಿ 5 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ಅವರು ಏನು ಮಾಡುತ್ತಿದ್ದಾರೆ. ಎಲ್ಲಿದ್ದಾರೆ ಎಂಬ ಮಾಹಿತಿ ಲಬ್ಯವಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅವರು ರೀಲ್ಸ್ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.