ಯಶ್​ ಮನದಲ್ಲಿ ಕಡಲಷ್ಟು ಪ್ರೀತಿ! ನಾಲ್ಕು ವರ್ಷಗಳಲ್ಲಿ ಮೊದಲ ಬಾರಿ ಬೇರೆ ಚಿತ್ರದ ಪ್ರಚಾರದಲ್ಲಿ ರಾಕಿ ಭಾಯ್​

asdv
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಟ ಯಶ್​ "ಕೆಜಿಎಫ್​​' ಸರಣಿ ಯಶಸ್ಸಿನ ಬಳಿಕ ಬೇರೆ ಯಾವ ಚಿತ್ರದ ಪ್ರಚಾರದಲ್ಲೂ ಪಾಲ್ಗೊಂಡಿರಲಿಲ್ಲ. ಆದರೆ, ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ತಮಗೆ ಮೊದಲ ಅವಕಾಶ ನೀಡಿದ "ಮೊಗ್ಗಿನ ಮನಸು' ಚಿತ್ರದ ನಿರ್ಮಾಪಕ ಇ. ಕೃಷ್ಣಪ್ಪ ನಿರ್ಮಾಣದ ಹೊಸ ಚಿತ್ರ "ಮನದ ಕಡಲು' ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದ್ದಾರೆ. "ಮುಂಗಾರು ಮಳೆ' ಚಿತ್ರದ ಬಳಿಕ ಇ. ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್​ ಭಟ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಚಿತ್ರವಿದು. "ಫಿಸಿಕ್ಸ್​ ಟೀಚರ್​' ಸುಮುಖ, "ಪದವಿ ಪೂರ್ವ' ಅಂಜಲಿ ಅನೀಷ್​, ರಾಶಿಕಾ ಶೆಟ್ಟಿ, ರಂಗಾಯಣ ರಘು ಮತ್ತು ದತ್ತಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಭಾನುವಾರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಲುಲು ಮಾಲ್​ನ ಹೊರಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಯಶ್​ "ಮನದ ಕಡಲು' ಚಿತ್ರದ ಟ್ರೇಲರ್​ ರಿಲೀಸ್​ ಮಾಡಿದ್ದಾರೆ. ಸಿನಿಮಾ ಇದೇ ಶುಕ್ರವಾರ (ಮಾ. 18) ರಾಜ್ಯಾದ್ಯಂತ ತೆರೆಗೆ ಬರಲಿದೆ.

ಇವನಿಗೆ ಕೊಬ್ಬು ಅಂದಿದ್ದರು!

"ಮನದ ಕಡಲು' ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿ ಚಿತ್ರರಂಗದಲ್ಲಿ ಪ್ರಾರಂಭದ ದಿನಗಳನ್ನು ಸ್ಮರಿಸಿಕೊಂಡ ಯಶ್​, "ನಾನು ಸೀರಿಯಲ್​ನಲ್ಲಿ ನಟಿಸುವಾಗ ತುಂಬ ಜನ ನಾನು ಸಿನಿಮಾದಲ್ಲಿ ಹೀರೋ ಆಗಬಹುದು ಅಂತ ತುಂಬ ಜನ ಮಾತನಾಡಿಕೊಳ್ಳುತ್ತಿದ್ದರು. ನನಗೂ ಚಿತ್ರಗಳಲ್ಲಿ ಅವಕಾಶಗಳು ದೊರೆಯುತ್ತಿದ್ದವು. ಆದರೆ, ಕಥೆ ಕೇಳಿದಾಗ, ತಂಡದವರು ಇದೇನಪ್ಪಾ ಇವನಿಗೆ ಇಷ್ಟೊಂದು ಕೊಬ್ಬು ಚಾನ್ಸ್​ ಕೊಟ್ಟರೆ ಇವನು ಸ್ಟೋರಿ ಕೇಳುತ್ತಿದ್ದಾನೆ ಅಂತ ಬೇಸರ ಮಾಡಿಕೊಂಡುಬಿಡುತ್ತಿದ್ದರು. ಅದರಿಂದಾಗಿ ನಾನು ಸಾಕಷ್ಟು ಸಿನಿಮಾಗಳನ್ನು ಮಾಡಿರಲಿಲ್ಲ. ಅದೇ ಸಮಯದಲ್ಲಿ "ಮೊಗ್ಗಿನ ಮನಸು' ಘೋಷಣೆಯಾಗಿತ್ತು. ಆಗ ರಾಧಿಕಾ ನನ್ನ ಟ್ರೆಂಡ್​​. ಅವರು ಆ ಚಿತ್ರದಲ್ಲಿ ನಟಿಸುತ್ತಿದ್ದರು. ಅವರಿಗೆ ವಿಶ್​ ಮಾಡಿದ್ದೆ. ಅವರನ್ನು ಒಮ್ಮೆ ಕೇಳಿದಾಗ ಬಹುತೇಕ ಶೂಟಿಂಗ್​ ಮುಗಿದಿದೆ ಅಂದಿದ್ದರು. ಆಗ ನನಗೆ ಇದೇ ತಂಡದಿಂದ ಆರ್​ ಬಂತು. "ಮೊಗ್ಗಿನ ಮನಸ್ಸು' ಚಿತ್ರದಲ್ಲಿ ನಟಿಸಬೇಕಿದ್ದ ನಟನಿಗೆ ಕಾಲು ಮುರಿದ ಕಾರಣ, ನನಗೆ ಅವಕಾಶ ಸಿಕ್ಕಿತ್ತು. ಶಶಾಂಕ್​ ಅವರು ಹೊಸಬ ಅಂತ ಹಿಂದೇಟು ಹಾಕದೇ ಕಥೆ ಹೇಳಿ, ಹಾಡುಗಳನ್ನೂ ಕೇಳಿಸಿದ್ದರು. ಆ ಸಮಯದಲ್ಲಿ ಇ. ಕೃಷ್ಣಪ್ಪರನ್ನು ಭೇಟಿ ಮಾಡಿದೆ. ಅಂದು ಅವರು ನನ್ನನ್ನು ನಡೆಸಿಕೊಂಡ ರೀತಿ, ಇಂದಿಗೂ ನನಗೆ ಅವರ ಮೇಲೆ ಗೌರವವಿದೆ. ಅವತ್ತು ಅವರು ನನಗೆ ಆ ಅವಕಾಶ ಕೊಟ್ಟಿದ್ದಕ್ಕೇ, ಮುಂದೆ ನನ್ನ ಜೀವನದಲ್ಲಿ ಏನೆಲ್ಲಾ ನಡೆಯಿತೋ, ಅದು ನಡೆಯಿತು. ಒಬ್ಬ ವ್ಯಕ್ತಿ ತಾನಾಗೇ ತಾನೇ ಬೆಳೆಯುವುದಿಲ್ಲ. ಅವರ ಸುತ್ತಮುತ್ತ ಸಾಕಷ್ಟು ಜನ ಪಿಲ್ಲರ್​ಗಳಂತೆ ನಿಂತು, ಆತನನ್ನು ಮುಂದೆ ತಳ್ಳುತ್ತಾರೆ. ಹಾಗೆ ಅವರು ಬೆವರು ಹರಿಸಿ, ಶ್ರಮಪಟ್ಟು ನನ್ನನ್ನು ಬೆಳೆಸಿದ್ದಾರೆ' ಎಂದು ಹೇಳಿಕೊಂಡರು.

ಸ್ವಾಭಿಮಾನ ಇರಲಿ, ಬೇಡುವುದು ಬೇಡ

"ಕನ್ನಡಿಗರು ಬೇರೆ ಭಾಷೆ ಸಿನಿಮಾ ನೋಡುತ್ತಾರೆ, ಕನ್ನಡ ಸಿನಿಮಾ ನೋಡಲ್ಲ ಅಂತ ನಾನೂ ಬೈಯುತ್ತಿದ್ದೆ' ಎಂದ ನಟ ಯಶ್​, "ಬಳಿಕ ಯೋಚಿಸುವಾಗ ನಮ್ಮ ಕೆಲಸ ನಾವು ಸರಿಯಾಗಿ ಮಾಡಿ, ಒಳ್ಳೆ ಸಿನಿಮಾ ಕೊಟ್ಟಾಗ ಕನ್ನಡಿಗರು ಕೈಬಿಟ್ಟಿಲ್ಲ. ಹೊಸಬರಿಗೆ ನಾನಿಷ್ಟೇ ಹೇಳೋದು ಅಪ್​ಗ್ರೇಡ್​ ಆಗೋಣ, ಕೆಲಸ ಕಲಿಯೋಣ, ದೊಡ್ಡ ಗುರಿಗಳನ್ನ ಇಟ್ಟುಕೊಳ್ಳೋಣ, ಸ್ವಾಭಿಮಾನ ಇಟ್ಟುಕೊಳ್ಳೋಣ, ಯಾರ ಮುಂದೆಯೂ ನಾವು ಕಡಿಮೆ ಅಂದುಕೊಳ್ಳುವುದು ಬೇಡ, ಯಾರ ಮುಂದೆಯೂ ತಲೆ ತಗ್ಗಿಸಿ ಬೇಡುವುದು ಬೇಡ, ಕಷ್ಟಪಟ್ಟು ಕೆಲಸ ಮಾಡೋಣ, ಬೇರೆಯವರೂ ನಮ್ಮನ್ನು ಗೌರವಿಸುವಂತೆ ದುಡಿಯೋಣ. ನಟನೆಯಷ್ಟೇ ಸಿನಿಮಾ ಅಲ್ಲ. ಕರಿಯರ್​ ಹೇಗೆ ರೂಪಿಸಿಕೊಳ್ಳಬೇಕು? ಡಿಸಿಪ್ಲೀನ್​ ಹೇಗಿರಬೇಕು? ಟ್ರೆಂಡ್​ ಏನಾಗುತ್ತಿದೆ? ನಿಮ್ಮ ಜವಾಬ್ದಾರಿಗಳೇನು? ಅಂತ ತಿಳಿದುಕೊಂಡು ಚಿತ್ರರಂಗಕ್ಕೆ ಬನ್ನಿ. ನಿರ್ದೇಶಕರೂ ಅಷ್ಟೇ ಸಿದ್ಧತೆ ಮಾಡಿಕೊಂಡು ಬನ್ನಿ' ಎಂದು ಹೊಸಬರಿಗೆ ಕಿವಿಮಾತು ಹೇಳಿದರು.

ಟಾಕ್ಸಿಕ್​ ಅಪ್​ಡೇಟ್​ ಕೊಡುತ್ತೇನೆ...

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಯಶ್​, "ಅಭಿಮಾನಿಗಳ ಋಣ ಹೇಗೆ ತೀರಿಸಬೇಕೋ ನನಗೆ ಗೊತ್ತಿಲ್ಲ. ಅಭಿಮಾನಿಗಳು ನನ್ನ ಹೆಸರು ಕೂಗುವುದರಿಂದ ನನಗೆ ದೊಡ್ಡಸ್ಥಿಕೆ ಬರುವುದಿಲ್ಲ, ಜವಾಬ್ದಾರಿ ತಂದುಕೊಡುತ್ತದೆ. ಅದು ಕುಗ್ಗುವಂತೆ ನಾನು ಎಂದಿಗೂ ನಡೆದುಕೊಳ್ಳಲ್ಲ. ಅದು ಮೇಲೆ ಏರುವಂತೆಯೇ ನಡೆದುಕೊಳ್ಳುತ್ತೇನೆ' ಎಂದರು. ಹಾಗೇ "ಟಾಕ್ಸಿಕ್​' ಚಿತ್ರದ ಬಗ್ಗೆ ನಿರೂಪಕಿ ಅನುಶ್ರೀ ಕೇಳಿದ ಪ್ರಶ್ನೆಗೆ, ""ಟಾಕ್ಸಿಕ್​' ಬಗ್ಗೆ ನಾನು ಮಾತನಾಡಲ್ಲ. "ಮನದ ಕಡಲು' ಚಿತ್ರತಂಡಕ್ಕೆ ಅಭಿಮಾನಿಗಳು ಆಶೀರ್ವಾದ ಮಾಡಿ. ನಾನೂ ಹೊಸಬನಾಗಿದ್ದಾಗ ನೀವು ನೀಡಿದ ಪ್ರೋತ್ಸಾಹದಿಂದಲೇ ಇವತ್ತು ಇಲ್ಲಿ ನಿಂತಿದ್ದೇನೆ. "ಟಾಕ್ಸಿಕ್​' ಅಪ್​ಡೇಟ್​ ಕೊಡುತ್ತೇನೆ. ಕೆಲಸ ಮಾಡುತ್ತಿದ್ದೇನೆ. ನಂಬಿಕೆ ಇಟ್ಟುಕೊಳ್ಳಿ. ದೊಡ್ಡದಾಗಿ ಏನೋ ಮಾಡುತ್ತಿದ್ದೇವೆ' ಎಂದಷ್ಟೇ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net