ರಾಬರ್ಟ್ v/s ಮಾಸ್ಟರ್?: ಒಂದೇ ದಿನ ಬಿಡುಗಡೆಗೆ ಸಿದ್ದವಾಗಿರುವ ಸಿನಿಮಾಗಳು

rabart 17 mar 20
Published on

ಬೆಂಗಳೂರು: ಕನ್ನಡದಲ್ಲಿ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ರಾಬರ್ಟ್’, ತಮಿಳಿನಲ್ಲಿ ವಿಜಯ್ ನಟನೆಯ ‘ಮಾಸ್ಟರ್’ ಸದ್ಯ ಸುದ್ದಿಯಲ್ಲಿರುವ ಸಿನಿಮಾಗಳು. ಈ ಎರಡೂ ಚಿತ್ರಗಳು ನಿರೀಕ್ಷೆ ದೃಷ್ಟಿಯಿಂದಲೂ ಸಾಕಷ್ಟು ಕ್ರೇಜ್ ಸೃಷ್ಟಿ ಮಾಡಿವೆ. ಹೀಗೆ ಹೈಪ್ ಸೃಷ್ಟಿಸಿರುವ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ?

ಹೌದು, ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಸಿನಿಮಾ ಏಪ್ರಿಲ್ 9ರಂದು ಬಿಡುಗಡೆಯಾಗುವ ಸುದ್ದಿ ಈಗಾಗಲೇ ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ. ‘ಮಾಸ್ಟರ್’ ಸಹ ಅದೇ ದಿನ ಚಿತ್ರಮಂದಿರಗಳಿಗೆ ದಾಪುಗಾಲಿಡುವುದು ಪಕ್ಕಾ ಆಗಿದೆ. ಹಾಗಾಗಿ ಬಾಕ್ಸ್ ಆಫೀಸ್​ನಲ್ಲಿ ಬಿಗ್​ಕ್ಲ್ಯಾಶ್ ಆಗುವ ಸಂಭವ ಹೆಚ್ಚಾಗಿದೆ!

ಇದೆಲ್ಲದರ ಜತೆಗೆ ‘ಮಾಸ್ಟರ್’ ತಂಡದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮೊದಲ ಬಾರಿಗೆ ವಿಜಯ್ ಸಿನಿಮಾ ಕನ್ನಡಕ್ಕೆ ಡಬ್ ಆಗಿ ತೆರೆಕಾಣುತ್ತಿರುವುದಲ್ಲದೆ, ಕನ್ನಡ ಅವತರಣಿಕೆಗೆ ಸ್ವತಃ ವಿಜಯ್ ಅವರೇ ಡಬ್ ಮಾಡಲಿದ್ದಾರೆ.

‘ವಿಜಯ್ ಮೂಲತಃ ತಮಿಳಿನವರಾದರೂ ಕನ್ನಡ ಮಾತನಾಡುತ್ತಾರೆ. ಹಾಗಾಗಿ ಅವರೇ ಈ ಸಾಹಸಕ್ಕೆ ಮುಂದಾಗಿದ್ದು, ಇನ್ನೊಂದು ವಾರದಲ್ಲಿ ಅವರ ಪಾಲಿನ ಡಬ್ಬಿಂಗ್ ಮುಗಿಸಿಕೊಡಲಿದ್ದಾರೆ. ಬಳಿಕ ಏ.9ಕ್ಕೆ ಸಿನಿಮಾ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಕರ್ನಾಟಕದಲ್ಲಿ ‘ಮಾಸ್ಟರ್’ ಸಿನಿಮಾ ವಿತರಣೆ ಮಾಡುತ್ತಿರುವ ಧೀರಜ್ ಎಂಟರ್​ಟೇನ್​ವೆುಂಟ್​ನ ಧೀರಜ್ ಪೈ.

ಮೂರು ಭಾಷೆಗಳಲ್ಲಿ ಬಿಡುಗಡೆ: ಸದ್ಯದ ಲೆಕ್ಕಾಚಾರದ ಪ್ರಕಾರ, ‘ರಾಬರ್ಟ್’ ತಂಡ ಏಪ್ರಿಲ್ ಮೊದಲ ಅಥವಾ ಎರಡನೇ ವಾರದಲ್ಲಿ ರಿಲೀಸ್ ಮಾಡುವ ಪ್ಲಾನ್​ನಲ್ಲಿದೆ. ಅದೇ ಸಮಯದಲ್ಲಿ ತೆಲುಗು ಮತ್ತು ಕನ್ನಡ ಡಬ್ ಅವತರಣಿಕೆಯ ಜತೆಗೆ ಮೂಲ ತಮಿಳಿನ ‘ಮಾಸ್ಟರ್’ ಚಿತ್ರವೂ ಕರ್ನಾಟಕದಲ್ಲಿ ಬಿಡುಗಡೆ ಆಗಲಿದೆ. ಹೀಗಾಗಿ ಮೂರು ಭಾಷೆಗಳಿಂದ ‘ರಾಬರ್ಟ್’ಗೆ ‘ಮಾಸ್ಟರ್’ ಸ್ಟ್ರೋಕ್ ನೀಡಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಇದೆಲ್ಲವನ್ನು ಬದಿಗಿಟ್ಟು ನೋಡಿದರೆ, ಕರ್ನಾಟಕದಲ್ಲಿ ‘ರಾಬರ್ಟ್’ ಚಿತ್ರ ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ದರ್ಶನ್ ಅವರನ್ನು ಹೀಗೂ ನೋಡಬಹುದು ಎಂದು ಬಗೆಬಗೆಯ ಅವತಾರದಲ್ಲಿ ನಿರ್ದೇಶಕ ತರುಣ್ ತೋರಿಸಿದ್ದಾರೆ. ಅವರ ಆ ಪ್ರಯತ್ನಕ್ಕೂ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪೋಸ್ಟರ್, ಟೀಸರ್ ಗಮನಸೆಳೆದರೆ, ಇತ್ತೀಚೆಗಷ್ಟೇ ಬಿಡುಗಡೆಯಾದ ‘ಜೈ ಶ್ರೀರಾಮ್ ...’ ಹಾಡೂ ಸೌಂಡು ಮಾಡುತ್ತಿದೆ.

ಮೊದಲ ಸಲ ‘ಮಾಸ್ಟರ್’ ಚಿತ್ರದ ಮೂಲಕ ಕಾಲಿವುಡ್ ಸ್ಟಾರ್ ನಟ ವಿಜಯ್ ಕನ್ನಡಕ್ಕೆ ಬರುತ್ತಿದ್ದಾರೆ. ಸ್ವತಃ ಅವರೇ ಡಬ್ ಮಾಡುತ್ತಿರುವುದು ವಿಶೇಷ. ಏ.9ಕ್ಕೆ ಸಿನಿಮಾ ಬಿಡುಗಡೆ ಪ್ಲ್ಯಾನ್ ಇದ್ದು, ರಾಜ್ಯಾದ್ಯಂತ ವಿತರಣೆಯ ಹಕ್ಕನ್ನು ನಾವೇ ಪಡೆದುಕೊಂಡಿದ್ದೇವೆ. | ಧೀರಜ್ ಪೈ ವಿತರಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net