'ರಾಬರ್ಟ್​' ತೆಲುಗು, 'ಪೊಗರು' ತಮಿಳು ಹಾಡುಗಳ ಬಿಡುಗಡೆ

Robert - Pogaru - Final
Published on

ಬೆಂಗಳೂರು: ಕನ್ನಡ ಚಿತ್ರರಂಗದ ಸದ್ಯದ ಎರಡು ನಿರೀಕ್ಷಿತ ಚಿತ್ರಗಳೆಂದರೆ ಅದು ಧ್ರುವ ಸರ್ಜಾ ಅಭಿನಯದ 'ಪೊಗರು' ಮತ್ತು ದರ್ಶನ್​ ಅಭಿನಯದ 'ರಾಬರ್ಟ್​'. ಈ ಪೈಕಿ 'ಪೊಗರು' ಚಿತ್ರವು ಫೆಬ್ರವರಿ 19ರಂದು ಬಿಡುಗಡೆಯಾದರೆ, 'ರಾಬರ್ಟ್​' ಚಿತ್ರವು ಮಾರ್ಚ್​​ 11ರಂದು ಬಿಡುಗಡೆಯಾಗುತ್ತಿವೆ.

ಈ ಚಿತ್ರಗಳು ಬರೀ ಕನ್ನಡ ಮಾತ್ರವಲ್ಲ. 'ಪೊಗರು' ಚಿತ್ರವು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾದರೆ, 'ಪೊಗರು' ಚಿತ್ರವು ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗುತ್ತಿವೆ. ಈ ಎರಡೂ ಚಿತ್ರಗಳು ಕನ್ನಡವಲ್ಲದೆ ಬೇರೆ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ ಎನ್ನುವುದು ವಿಶೇಷ.

ಬಿಡುಗಡೆಗೆ ಇನ್ನು ಕೆಲವೇ ದಿನಗಳು ಇರುವ ಹಿನ್ನೆಲೆಯಲ್ಲಿ ಎರಡೂ ತಂಡಗಳು ಚಿತ್ರದ ಪ್ರಚಾರವನ್ನು ಜೋರಾಗಿ ಮಾಡುತ್ತಿವೆ. ಬರೀ ಕನ್ನಡವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಪ್ರಚಾರ ಕಾರ್ಯವನ್ನು ಶುರುಮಾಡಿರುವುದು ವಿಶೇಷ.

ಈ ಪೈಕಿ, 'ಪೊಗರು' ಚಿತ್ರದ ತಮಿಳು ಅವತರಣಿಕೆಯ 'ಖರಾಬು' ಹಾಡು ಭಾನುವಾರ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ತಮಿಳುನಾಡಿನ ಜನರಿಂದ ಮೆಚ್ಚುಗೆ ಸಿಕ್ಕಿದ್ದು, ಈಗಾಗಲೇ 29 ಲಕ್ಷ ವೀಕ್ಷಣೆ ಸಿಕ್ಕಿದೆ. ಮೂಲ ಹಾಡನ್ನು ಹಾಡಿದ್ದ ಚಂದನ್​ ಶೆಟ್ಟಿ ಅವರೇ ತಮಿಳು ಹಾಡನ್ನೂ ಹಾಡಿದ್ದಾರೆ ಎನ್ನುವುದು ವಿಶೇಷ.

ಇನ್ನು, 'ರಾಬರ್ಟ್​' ಚಿತ್ರದ ತೆಲುಗು ಅವತರಣಿಕೆಯ 'ರಾ ರಾ ರಾ ರಾ ನೇನ್​ ರೆಡಿ ...' ಹಾಡು ಇಂದು ಸಂಜೆ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ತಾಸುಗಳಲ್ಲಿ ಎರಡು ಲಕ್ಷ ವೀಕ್ಷಣೆ ಪಡೆದಿದೆ. ಈ ಹಾಡನ್ನು ಸಾಯಿ ಚರಣ್​ ಭಾಸ್ಕರುನಿ, ಸಾಕೇತ್​, ಆದಿತ್ಯ ಅಯ್ಯಂಗಾರ್​ ಮತ್ತು ಶ್ರೀನಾಥ್​ ಹಾಡಿದ್ದಾರೆ. ಈ ಹಾಡು ಆನಂದ್ ಆಡಿಯೋದ ಯೂಟ್ಯೂಬ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ.

ಅಲ್ಲಿಗೆ ಕನ್ನಡದ ಇಬ್ಬರು ಸ್ಟಾರ್​ ನಟರ ಚಿತ್ರಗಳ ಹಾಡುಗಳು ಬೇರೆ ಭಾಷೆಗಳಲ್ಲೂ ಹವಾ ಸೃಷ್ಟಿಸಿವೆ. ಈ ಹಾಡುಗಳನ್ನು ಚೆನ್ನಾಗಿ ಸ್ವೀಕರಿಸಿರುವ ಅಲ್ಲಿನ ಪ್ರೇಕ್ಷಕರು, ಚಿತ್ರ ಬಿಡಗುಡೆಯಾದಾಗ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net