ಶ್ರೀನಿಯ ಸಿನಿಮಾ ಮೇಕಿಂಗ್ ವರ್ಕ್‌ಶಾಪ್ ಆನ್‌ಲೈನ್‌ನಲ್ಲೇ ಪಾಠ ಮಾಡ್ತಿದ್ದಾರೆ ‘ಓಲ್ಡ್ ಮಾಂಕ್’ ನಿರ್ದೇಶಕ

Sini Workshop New
Published on

ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿತ್ರರಂಗದ ಮಂದಿ ಮನೆ ಸೇರಿದ್ದಾರೆ. ಕೆಲವರು ಏನು ಮಾಡಬೇಕು ಎಂದು ಗೊತ್ತಾಗದೆ, ಸಿಕ್ಕಿರುವ ಸಮಯವನ್ನು ಹೆಂಡ್ತಿ-ಮಕ್ಕಳ ಜತೆಗೆ ಕಳೆಯುತ್ತಿದ್ದರೆ, ಇನ್ನೂ ಕೆಲವರು ಆ ಸಮಯವನ್ನು ಒಂದಿಷ್ಟು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಆರ್‌ಜೆ ಶ್ರೀನಿ ಸಹ ತಮಗೆ ಸಿಕ್ಕ ಸಮಯ ಮತ್ತು ಅವಕಾಶವನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಸಿನಿಮಾ ತಯಾರಿಕೆಯ ವರ್ಕ್‌ಶಾಪ್ ಮಾಡುತ್ತಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಶ್ರೀನಿ ನಟನೆ ಮತ್ತು ನಿರ್ದೇಶನದ ‘ಓಲ್ಡ್ ಮಾಂಕ್’ನ ಚಿತ್ರೀಕರಣ ನಡೆಯಬೇಕಿತ್ತು. ಆದರೆ, ಅಷ್ಟರಲ್ಲಿ ಕರೊನಾ ಕಾಟದಿಂದ ಇಡೀ ದೇಶವೇ ಸ್ಥಬ್ಧವಾಗಿ, ಎಲ್ಲರೂ ಮನೆಯಲ್ಲಿ ಕೂರುವಂತಾಯಿತು. ಈ ಸಮಯವನ್ನು ಸಿನಿಮಾಸಕ್ತರ ಜತೆಗೆ ಕಳೆಯಲು ನಿರ್ಧರಿಸಿರುವ ಶ್ರೀನಿ, ಇದೀಗ ಪ್ರತಿ ದಿನ ಸಂಜೆ ಆರಕ್ಕೆ ಅರ್ಧ ಗಂಟೆ ಕಾಲ ಇನ್‌ಸ್ಟಾಗ್ರಾಂನಲ್ಲಿ ಸಿನಿಮಾ ಮೇಕಿಂಗ್ ವರ್ಕ್‌ಶಾಪ್ ಮಾಡುತ್ತಿದ್ದಾರೆ.

ಈ ಕುರಿತು ಮಾತನಾಡುವ ಅವರು, ‘ಮೊನ್ನೆ ಸೋಮವಾರದಿಂದ ಈ ಕ್ಲಾಸ್ ಶುರು ಮಾಡಿದೆ. ಪ್ರತಿ ದಿನ ಅರ್ಧ ಗಂಟೆ ಕಾಲ ಸಿನಿಮಾದ ವಿವಿಧ ವಿಭಾಗಗಳ ಕುರಿತು ಕಾರ್ಯಾಗಾರ ಮಾಡುತ್ತಿದ್ದೇನೆ. ಈಗಾಗಲೇ ಕಥೆ, ಚಿತ್ರಕಥೆ ಬಗ್ಗೆ ಮಾತಾಡಿದ್ದೇನೆ. ಬುಧವಾರ ಬಜೆಟಿಂಗ್ ಬಗ್ಗೆ ಮಾತಾಡುವುದಿದೆ. ಇನ್ನು ಮುಂದಿನ ಮೂರು ತರಗತಿಗಳಲ್ಲಿ ಸಂಕಲನ, ಛಾಯಾಗ್ರಹಣ ಮತ್ತು ನಟನೆಯ ಬಗ್ಗೆ ಮಾತನಾಡಲಿದ್ದೇನೆ. ಪ್ರತಿ ದಿನದ ಲೈವ್‌ನಲ್ಲಿ 300 ಜನ ಭಾಗವಹಿಸುತ್ತಿದ್ದಾರೆ’ ಎನ್ನುತ್ತಾರೆ ಶ್ರೀನಿ.

ಇಂಥದ್ದೊಂದು ಕಾರ್ಯಾಗಾರ ಮಾಡುವ ಬಗ್ಗೆ ಅವರಿಗೆ ಯೋಚನೆ ಎಲ್ಲಿಂದ ಬಂತು ಎಂದು ಕೇಳಿದರೆ, ‘ತುಂಬಾ ಜನರಿಗೆ ಸಿನಿಮಾ ಮೇಕಿಂಗ್ ಬಗ್ಗೆ ಆಸಕ್ತಿ ಇರುತ್ತದೆ. ಆದರೆ, ಕಲಿಯುವುದಕ್ಕೆ ಕಾರಣಾಂತರಗಳಿಂದ ಆಗುವುದಿಲ್ಲ. ನಾನು ಸಹ ಆನ್‌ಲೈನ್‌ನಲ್ಲೇ ಸಿನಿಮಾ ಮಾಡುವುದನ್ನು ಕಲಿತೆ. ಈಗ ನನ್ನ ಅನುಭವಗಳನ್ನೆಲ್ಲಾ ಈ ಲೈವ್ ಕಾರ್ಯಾಗಾರದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಪ್ರತಿ ವಿಷಯದ ಬಗ್ಗೆ 15 ನಿಮಿಷ ನಾನು ಮಾಡನಾಡಿದರೆ, ಇನ್ನೂ 15 ನಿಮಿಷಗಳ ಕಾಲ ಆ ವಿಭಾಗದ ತಜ್ಞರೊಬ್ಬರು ಮಾತನಾಡುತ್ತಾರೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಶ್ರೀನಿ.

ಇನ್ನು ‘ಓಲ್ಡ್ ಮಾಂಕ್’ ಬಗ್ಗೆ ಮಾತನಾಡುವ ಅವರು, ಲಾಕ್‌ಡೌನ್ ಮುಗಿದ ನಂತರ ಸೂಕ್ತ ಸಮಯ ನೋಡಿ, ಚಿತ್ರವನ್ನು ಮುಂದುವರೆಸುವುದಾಗಿ ಅವರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net