

ಮುಂಬೈ: ಸಿನಿಮಾ ಮಂದಿ ಏನೇ ಮಾಡಿದರೂ ಚೂರು ಹೆಚ್ಚೇ ಖರ್ಚು ಮಾಡುತ್ತಾರೆ. ಹಬ್ಬ ಇರಲಿ, ಮನೆಯಲ್ಲಿನ ಕಾರ್ಯಕ್ರಮವೇ ಇರಲಿ. ನೀರು ಸುರಿದಂತೆ ಹಣ ವೆಚ್ಚ ಮಾಡಿ, ಆಚರಣೆಯನ್ನು ಅದ್ದೂರಿಯಾಗಿಯೇ ಮಾಡುವುದು ಸಾಮಾನ್ಯ. ಆದರೆ, ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಮಾತ್ರ ಅವರೆಲ್ಲರಿಗಿಂತ ಕೊಂಚ ವಿಭಿನ್ನವಾಗಿ ಕಾಣಿಸುತ್ತಾರೆ. ಈ ವರ್ಷದ ದೀಪಾವಳಿ ಆಚರಣೆಯಲ್ಲಿ ಸಣ್ಣ ಬದಲಾವಣೆಯೊಂದನ್ನು ಮಾಡಿಕೊಂಡಿದ್ದಾರವರು.
ಹಬ್ಬದ ಹಿನ್ನೆಲೆಯಲ್ಲಿ ಮಾಲ್ಗಳಿಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬಟ್ಟೆ-ಬರೆ ತರದೆ, ಮನೆಯಲ್ಲಿಯೇ ಹಬ್ಬಕ್ಕೆ ತೊಡುವ ಬಟ್ಟೆಯನ್ನು ರೆಡಿ ಮಾಡಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ, ಅಮ್ಮನ ಹಳೆಯ ಸೀರೆಯನ್ನೇ ಹಬ್ಬದ ಬಟ್ಟೆಗಳನ್ನಾಗಿ ತೊಟ್ಟು ಸಂಭ್ರಮಿಸಿದ್ದಾರೆ.
ಅಮ್ಮನ ಸೀರೆಯಲ್ಲಿಯೇ ತಮಗೂ ಮತ್ತು ಇಬ್ಬರು ಮಕ್ಕಳಿಗೆ ಬಟ್ಟೆ ಹೊಲಿಸಿದ್ದಾರೆ. ಆ ಬಟ್ಟೆಯನ್ನೇ ಹಬ್ಬದ ಪ್ರಯುಕ್ತ ಧರಿಸಿ ದೀಪಾವಳಿಯ ಆಚರಣೆ ಮಾಡಿದ್ದಾರೆ. ಅದರ ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಸದ್ಯ ಈ ವಿಡಿಯೋ ತುಣುಕಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)