ಚಾಕೊಲೇಟ್‌ಗಾಗಿ ನಟಿಸಿದ್ದರಂತೆ ರಿಷಿ ಕಪೂರ್

Rishi Kapoor - Child
Published on

ರಿಷಿ ಕಪೂರ್ ಅಭಿನಯದ ಮೊದಲ ಚಿತ್ರ ‘ಬಾಬ್ಬಿ’ ಅಂತ ಎಲ್ಲರಿಗೂ ಗೊತ್ತೇ ಇದೆ. ಅದಕ್ಕೂ ಬಹಳ ವರ್ಷಗಳ ಮುಂಚೆಯೇ ಅವರು ಬಾಲನಟನಾಗಿ ಒಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವಿಷಯ ಗೊತ್ತಾ? ಗೊತ್ತಿಲ್ಲದಿದ್ದರೆ ಕೇಳಿ. ರಿಷಿ ಕಪೂರ್ ಐದನೇ ವಯಸ್ಸಿನವರಾಗಿದ್ದಾಗಲೇ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದರು. ಅದೇ ರಾಜ್ ಕಪೂರ್ ನಿರ್ದೇಶನದ ‘ಶ್ರೀ 420’.

‘ಶ್ರೀ 420’ ಚಿತ್ರದ ‘ಪ್ಯಾರು ಹುವಾ ಇಕರಾರ್ ಹುವಾ ...’ ಹಾಡು ನೆನಪಿರಬಹುದು. ಆ ಹಾಡಿನಲ್ಲಿ ಮಳೆಯಲ್ಲಿ ಮೂರು ಮಕ್ಕಳು ರೈನ್‌ಕೋಟ್ ಧರಿಸಿ ನಡೆದು ಬರುವ ಒಂದು ದೃಶ್ಯವಿದೆ. ಆ ದೃಶ್ಯದಲ್ಲಿ ರಿಷಿ ಕಪೂರ್ ತಮ್ಮ ಅಣ್ಣ ರಣಧೀರ್ ಕಪೂರ್ ಮತ್ತು ಅಕ್ಕ ರೀತೂ ಕಪೂರ್ ಜತೆಗೆ ಕಾಣಿಸಿಕೊಂಡಿದ್ದಾರೆ. ಅದೇ ಅವರ ಮೊದಲ ಚಿತ್ರವಾಗಿತ್ತು ಎನ್ನುವುದು ವಿಶೇಷ.

ಈ ಚಿತ್ರದಲ್ಲಿ ನಟಿಸಿದ ಅನುಭವವನ್ನು ರಿಷಿ ಕಪೂರ್ ಕೆಲವು ವರ್ಷಗಳ ಹಿಂದೆ ಹಂಚಿಕೊಂಡಿದ್ದರು. ‘ಮಳೆಯಲ್ಲಿ ನಾವು ಮೂರು ಜನ ನಡೆದು ಬರುವ ದೃಶ್ಯ ಅದು. ನೀರು ಮುಖಕ್ಕೆ ಬಡಿಯುತ್ತಿದ್ದಂತೆಯೇ ನಾನು ಅಳುವುದಕ್ಕೆ ಶುರು ಮಾಡುತ್ತಿದ್ದೆ. ಎಷ್ಟು ಬಾರಿ ರೀಟೇಕ್ ಮಾಡಿದರೂ, ಶಾಟ್ ಓಕೆ ಆಗುತ್ತಿರಲಿಲ್ಲ. ಆಗ ನರ್ಗಿಸ್ ಅವರು ಬಂದು, ಅಳಬಾರದು ಎಂದರು. ಅಳದೇ ಚೆನ್ನಾಗಿ ನಟಿಸಿದರೆ, ಒಂದು ಚಾಕೊಲೇಟ್ ಕೊಡುವುದಾಗಿ ಹೇಳಿದ್ದರು. ಚಾಕೊಲೇಟ್ ಆಸೆಗೆ ನಾನು ಮುಂದಿನ ಶಾಟ್‌ನಲ್ಲಿ ಅಳಲಿಲ್ಲ. ಆ ಶಾಟ್ ಓಕೆಯಾಯಿತು. ಅದೇ ನನ್ನ ಮೊದಲ ಶಾಟ್ ಆಯಿತು’ ಎಂದು ನೆನಪಿಸಿಕೊಂಡಿದ್ದಾರೆ ರಿಷಿ ಕಪೂರ್.

ಹೀಗೆ ‘ಶ್ರೀ 420’ನಲ್ಲಿ ಮೊದಲ ಬಾರಿಗೆ ಅಭಿನಯಿಸಿದ ರಿಷಿ ಕಪೂರ್, ಆ ನಂತರ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಈಗ ಇತಿಹಾಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net