ರೊಮ್ಯಾನ್ಸ್‌ಗೆ ಇನ್ನೊಂದು ಹೆಸರೇ ರಿಷಿ ಕಪೂರ್ ... ಬಾಲಿವುಡ್‌ನ ಜನಪ್ರಿಯ ರೊಮ್ಯಾಂಟಿಕ್ ಹೀರೋ

Top 10
Published on

ಬಾಲಿವುಡ್‌ನಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ ಕೆಲವೇ ಕೆಲವು ಹೀರೋಗಳ ಪೈಕಿ ರಿಷಿ ಕಪೂರ್ ಸಹ ಒಬ್ಬರು. 1970ರಲ್ಲಿ ಬಿಡುಗಡೆಯಾದ ‘ಬಾಬ್ಬಿ’ಚಿತ್ರದಿಂದ ಕಳೆದ ವರ್ಷ ಬಿಡುಗಡೆಯಾದ ‘ದಿ ಬಾಡಿ’ ಚಿತ್ರದವರೆಗೂ ರಿಷಿ ಕಪೂರ್ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. 90ರ ದಶಕದ ನಂತರ ಬ್ರೇಕ್ ತೆಗೆದುಕೊಂಡು ಆ ನಂತರ ಪೋಷಕ ಪಾತ್ರಗಳತ್ತ ಶಿಫ್ಟ್​ ಆದರೂ, ಅದಕ್ಕೂ ಮುನ್ನ ಸತತ 25 ವರ್ಷಗಳ ಕಾಲ ಹೀರೋ ಆಗಿ ನಟಿಸಿದ ಹೆಗ್ಗಳಿಕೆ ರಿಷಿ ಕಪೂರ್ ಅವರಿಗಿದೆ.

ರಿಷಿ ಕಪೂರ್ ಹೆಚ್ಚಾಗಿ ರೊಮ್ಯಾಂಟಿಕ್ ಹೀರೋ ಆಗಿಯೇ ಕಾಣಿಸಿಕೊಂಡವರು. ಅದಕ್ಕೆ ಕಾರಣ, ಅವರು ಹೀರೋ ಆಗಿ ಅಭಿನಯಿಸಿದ ಮೊದಲ ಚಿತ್ರ ‘ಬಾಬ್ಬಿ’ ಒಂದು ಲವ್‌ಸ್ಟೋರಿಯಾಗಿತ್ತು. ಆ ನಂತರ ಅವರು ಹಲವು ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಿದ್ದಷ್ಟೇ ಅಲ್ಲ, ಒಂದು ಕಾಳದಲ್ಲಿ ರೊಮ್ಯಾನ್ಸ್‌ಗೆ ಇನ್ನೊಂದು ಹೆಸರೇ ರಿಷಿ ಕಪೂರ್ ಎನ್ನುವಷ್ಟರ ಮಟ್ಟಿಗೆ ಅವರು ಜನಪ್ರಿಯವಾಗಿದ್ದರು.

‘ಬಾಬ್ಬಿ’ ನಂತರ ಅವರು ಹಲವು ಚಿತ್ರಗಳಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ‘ಖೇಲ್ ಖೇಲ್ ಮೇ’, ‘ಲೈಲಾ ಮಜ್ನು’, ‘ಸರಗಮ್’, ‘ಕರ್ಜ್’, ‘ಸಾಗರ್’, ‘ಪ್ರೇಮ್ ರೋಗ್’, ‘ಚಾಂದಿನಿ’, ‘ಹೆನ್ನಾ’, ‘ದೀವಾನಾ’ ಹೀಗೆ ಹಲವು ರೊಮ್ಯಾಂಟಿಕ್ ಹೀರೋ ಆಗಿ ಅಭಿನಯಿಸಿದ್ದರು. ಬಹುಶಃ ಅವರ ಕೊನೆಯ ದೊಡ್ಡ ಹಿಟ್ ಎಂದರೆ ಅದು ‘ದೀವಾನಾ’. ಈ ಚಿತ್ರದ ನಂತರ ಹೀರೋ ಆಗಿ ರಿಷಿ ಕಪೂರ್ ಅಂತಹ ದೊಡ್ಡ ಯಶಸ್ಸು ಕಾಣಲೇ ಇಲ್ಲ ಎನ್ನುವುದು ಸತ್ಯ.

ರಿಷಿ ಕಪೂರ್ ನಂತರ ಹಲವು ರೊಮ್ಯಾಂಟಿಕ್ ಹೀರೋಗಳು ಬಾಲಿವುಡ್‌ನಲ್ಲಿ ಬಂದು ಹೋಗಿದ್ದಾರೆ. ಆದರೆ, ಇವತ್ತಿಗೂ ರೊಮ್ಯಾಂಟಿಕ್ ಹೀರೋ ಎಂದರೆ ನೆನಪಿಗೆ ಬರುವುದು ರಿಷಿ ಕಪೂರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net