ಏನೇ ಆಗ್ಲಿ ಎಣ್ಣೆ ಬೇಕೇ ಬೇಕು ಎಂದ ರಿಷಿ ಕಪೂರ್: ಕೊನೆಗೆ ಈ ಹಿರಿಯ ನಟನಿಗೆ ಸಿಕ್ಕಿದ್ದೇನು?!

Untitled
Published on

ಮುಂಬೈ: ಸದ್ಯ ಇಡೀ ಭಾರತವೇ ಲಾಕ್‌ಡೌನ್ ಆಗಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರಾವುದು ಕೈಗೆಟಕುವುದು ಕಷ್ಟಕರವಾಗಿದೆ. ಇಂಥ ಸಮಯದಲ್ಲಿ ಬಾಲಿವುಡ್‌ನ ಈ ಹಿರಿಯ ನಟನಿಗೆ ಎಣ್ಣೆ ಬೇಕಂತೆ! ಈ ವಿಚಾರವನ್ನು ಸ್ವತಃ ಟ್ವಿಟರ್ ಮೂಲಕ ಅವರು ಹೇಳಿಕೊಂಡಿದ್ದಾರೆ. ಹೌದು, ಬಾಲಿವುಡ್ ನಟ ರಿಷಿ ಕಪೂರ್ ಸದ್ಯ ಎಣ್ಣೆ ಗುಂಗಿನಲ್ಲಿದ್ದಾರೆ. ನೇರವಾಗಿ ನನಗಷ್ಟೇ ಬೇಕು ಎನ್ನುವ ಬದಲು, ಮದ್ಯದಂಗಡಿ ತೆರೆದರೆ ಸರ್ಕಾರಕ್ಕೂ ಆದಾಯ ಹರಿದುಬರಲಿದೆ ಎಮದು ಪರೋಕ್ಷವಾಗಿ ಸರ್ಕಾರಕ್ಕೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.

ಅವರ ಟ್ವೀಟ್​ನ ವಿವರಣೆ ಇಲ್ಲಿದೆ. ‘ಸ್ವಲ್ಪ ವಿಚಾರಿಸಿ. ಪರವಾನಗಿ ಇರುವಂಥ ಮದ್ಯದಂಗಡಿಗಳನ್ನು ಸಂಜೆ ಮೇಲೆ ತೆರೆದರೆ ಒಳ್ಳೆಯದು. ತಪ್ಪು ತಿಳಿಯಬೇಡಿ. ಬಹುತೇಕರೆಲ್ಲರೂ ಈಗ ಮನೆಯಲ್ಲಿದ್ದಾರೆ. ಅದರಲ್ಲೂ ಪುರುಷರೂ ಮನೆಯಲ್ಲಿಯೇ ಡಿಪ್ರೆಷನ್ ಮೂಡ್‌ನಲ್ಲಿದ್ದಾರೆ. ಪೊಲೀಸರು, ವೈದ್ಯರು ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ. ಹಾಗಾಗಿ ಒಂದಷ್ಟು ಮದ್ಯ ಮಾರಾಟಕ್ಕೂ ಅನುವು ಮಾಡಿಕೊಡಿ. ನಿಮ್ಮ ಗಮನಕ್ಕೆ ಇದೆಯೊ ಇಲ್ಲವೋ ಗೊತ್ತಿಲ್ಲ, ಈಗಾಗಲೇ ಬ್ಲಾಕ್‌ನಲ್ಲಿ ಎಣ್ಣೆ ಮಾರಾಟವಾಗುತ್ತಿದೆ’.

ರಿಷಿ ಅವರ ಈ ಟ್ವೀಟ್​ ಬಾಲಿವುಡ್ ಸಿನಿಮಾ ನಿರ್ದೇಶಕ ಕುನಾಲ್ ಕೊಹ್ಲಿ ಸಾಥ್ ನೀಡಿದ್ದಾರೆ. ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ತೆರೆದರೆ ಒಳ್ಳೆಯದು. ರಾಜ್ಯ ಸರ್ಕಾರಕ್ಕೆ ಆದಾಯವೂ ಅಷ್ಟೇ ಮಹತ್ವದ್ದಾಗಿದೆ ಎಂದಿದ್ದಾರೆ. ಮತ್ತೆ ಕೆಲವರು, ಜನರಿಗೆ ಅಗತ್ಯವಾದ ಆಹಾರವೇ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಎಣ್ಣೆ ಬೇಕೆ? ಟಿವಿ ನೋಡಿ ನಿಜ ಪರಿಸ್ಥಿತಿ ಅರಿವಾಗುತ್ತಿದೆ ಎಂದಿದ್ದಾರೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಬಗ್ಗೆ ಗೌರವಾನ್ವಿತ ನಾಗರಿಕನಾಗಿ ಸರ್ಕಾರಕ್ಕೆ ನೀವೆ ಆ ಬಗ್ಗೆ ಮಾಹಿತಿ ನೀಡಬೇಕು. ಅದು ನಿಮ್ಮ ಕರ್ತವ್ಯ ಎಂದು ಕಮೆಂಟ್‌ಗಳು ಸಂದಾಯವಾಗುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net