

ಬೆಂಗಳೂರು : ‘ಕಾಂತಾರ’ ಯಶಸ್ಸಿನ ಬಳಿಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಹೀಗಾಗಿ, ಕನ್ನಡ ಸೇರಿ ಪರಭಾಷೆಯ ಸಾಲು ಸಿನಿಮಾಗಳು ಅವರ ಕೈಯಲ್ಲಿವೆ. ಸದ್ಯ ರಿಷಬ್ ‘ಕಾಂತಾರ- ಚಾಪ್ಟರ್ 1’ ಶೂಟಿಂಗ್ ಪೂರ್ಣಗೊಳಿಸಿದ್ದು, ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿವೆ. ಇದೇ ಅ. 2ಕ್ಕೆ ವಿಶ್ವಾದ್ಯಂತ ಚಿತ್ರ ಏಳು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈ ಖುಷಿಯ ಮಧ್ಯೆ ರಿಷಬ್ ಮತ್ತೊಂದು ಸಂತೋಷದ ಸುದ್ದಿ ನೀಡಿದ್ದು, ಹೊಸ ಚಿತ್ರ ಘೋಷಿಸಿದ್ದಾರೆ. ಆ ಮೂಲಕ ಮತ್ತೊಂದು ಐತಿಹಾಸಿಕ ಪಾತ್ರಕ್ಕೆ ಅವರು ಸಜ್ಜಾಗುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ‘ಈಗ’ ಹಾಗೂ ‘ಬಾಹುಬಲಿ’ ಸರಣಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದು, ‘ಅಕಾಶವಾಣಿ’ ಎಂಬ ತೆಲುಗು ಚಿತ್ರ ನಿರ್ದೇಶಿಸಿದ್ದ ಅಶ್ವಿನ್ ಗಂಗರಾಜು ಈ ಐತಿಹಾಸಿಕ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಸದ್ಯಕ್ಕೆ ‘ಪ್ರೊಡಕ್ಷನ್ ನಂ 36’ ಎಂದು ತಾತ್ಕಾಲಿಕ ಶೀರ್ಷಿಕೆ ಇಡಲಾಗಿದ್ದು, ‘ಲಕ್ಕಿ ಭಾಸ್ಕರ್’ ನಿರ್ಮಿಸಿದ್ದ ಸಿತಾರಾ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿಯಲ್ಲಿ ನಾಗವಂಶಿ ಮತ್ತು ಸಾಯಿ ಸೌಜನ್ಯ ಬಂಡವಾಳ ಹೂಡುತ್ತಿದ್ದಾರೆ. ಇದು 18ನೇ ಶತಮಾನದ ಬಂಗಾಳದ ಬಂಡಾಯಗಾರನ ಕಥೆ ಎಂದು ಹೇಳಲಾಗುತ್ತಿದೆ. ‘ಕ್ರಾಂತಿಕಾರರು ಯುದ್ಧದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಬದಲಾಗಿ ಕೆಲವರನ್ನು ವಿಧಿ ಆಯ್ಕೆ ಮಾಡುತ್ತದೆ. ಇದೊಂದು ಬಂಡಾಯವೆದ್ದ ವೀರನ ಕಥೆ’ ಎನ್ನುವ ಮೂಲಕ ನಟ ರಿಷಬ್ ಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡು ಅಧಿಕೃತವಾಗಿ ಸಿನಿಮಾ ಘೋಷಿಸಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಯುದ್ಧವೀರನೊಬ್ಬನ ಮುಂದೆ ಸಹಸ್ರಾರು ಸೈನಿಕರು ಸಮರಕ್ಕೆ ಸಿದ್ದರಾಗಿರುವ, ಅವರ ಮೇಲೆ ದಾಳಿ ಮಾಡಲು ಶತ್ರುಗಳ ಬಂದೂಕು, ಪಿರಂಗಗಿಗಳಿರುವ ಪೋಸ್ಟರ್‌ನಲ್ಲಿ ‘ಸುಟ್ಟ ಭೂಮಿಯಲ್ಲಿ ಕ್ರಾಂತಿಕಾರಿಯ ಉದಯ’ ಎಂಬ ಬರಹವಿದ್ದು, ಕುತೂಹಲ ಮೂಡಿಸುವಂತಿದೆ.
ಐತಿಹಾಸಿಕ, ಪೌರಾಣಿಕ ಚಿತ್ರಗಳಲ್ಲಿ ರಿಷಬ್: ‘ಕಾಂತಾರ’ ಬಿಗ್ ಹಿಟ್ ಬಳಿಕ ನಟ ರಿಷಬ್ ಶೆಟ್ಟಿ ಐತಿಹಾಸಿಕ ಹಾಗೂ ಪೌರಾಣಿಕ ಚಿತ್ರಗಳಿಗೆ ತಮ್ಮನ್ನು ತಾವು ಸೀಮಿತಗೊಳಿಸಿದರಾ ಅಂತ ಅವರ ಲೈನಪ್ ಗಮನಿಸಿದಾಗ ಪ್ರಶ್ನೆ ಮೂಡುವುದು ಸಹಜ. ಸದ್ಯ ರಿಲೀಸ್ ಸಿದ್ದವಾಗಿರುವ ‘ಕಾಂತಾರ ಚಾಪ್ಟರ್-1’ ಕದಂಬರ ಕಾಲಘಟ್ಟದ ಚಿತ್ರವಾಗಿದ್ದು, ಇಲ್ಲಿ ರಿಷಬ್ ಪೌರಾಣಿಕ ಹಾಗೂ ದೈವಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಘೋಷಣೆಯಾಗಿರುವ ತೆಲುಗು ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶಿಸಲಿರುವ ‘ಜೈ ಹನುಮಾನ್’ ಚಿತ್ರದಲ್ಲಿ ಹನುಮಂತನಾಗಿ, ಬಾಲಿವುಡ್ ನಿರ್ದೇಶಕ ಸಂದೀಪ್ ಸಿಂಗ್ ಅವರ ‘ಛತ್ರಪತಿ ಶಿವಾಜಿ ಮಹಾರಾಜ್: ದ ಪ್ರೈಡ್ ಆಫ್ ಭಾರತ್’ ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಚಿತ್ರಗಳು 2027ರಲ್ಲಿ ತೆರೆಕಾಣಲಿವೆ. ಈ ಮಧ್ಯೆ, ಅವರು ಮತ್ತೊಂದು ಐತಿಹಾಸಿಕ ಚಿತ್ರ ಆಯ್ಕೆ ಮಾಡಿಕೊಂಡಿರುವುದು ವಿಶೇಷ.