ಲಗಾನ್​ ನಿರ್ದೇಶಕರನ್ನು ಭೇಟಿಯಾಗಿದ್ದೇಕೆ ರಿಷಬ್​ ಶೆಟ್ಟಿ? ಡಿವೈನ್​ ಸ್ಟಾರ್​ ಕೊಟ್ರಾ ಮಹತ್ವದ ಸುಳಿವು?​

Rishab Shetty
Published on

ಮುಂಬೈ: ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಅವರು ತಮ್ಮ ನಿರ್ದೇಶನದ ಕಾಂತಾರ ಪ್ರೀಕ್ವೆಲ್​: ಚಾಪ್ಟರ್​ 1 ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. 2022ರಲ್ಲಿ ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಕಾಂತಾರ ಸೀಕ್ವೆಲ್​, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತು ಮತ್ತು ರಿಷಬ್​ ಅವರಿಗೆ ಡಿವೈನ್​ ಸ್ಟಾರ್​ ಪಟ್ಟವನ್ನು ತಂದುಕೊಟ್ಟಿದ್ದು ಇದೀಗ ಇತಿಹಾಸ. ನ್ಯಾಷನಲ್​ ಸ್ಟಾರ್​ ಆಗಿರುವ ರಿಷಬ್​ ಇದೀಗ ಕಾಂತಾರ ಪ್ರೀಕ್ವೆಲ್​ ಕಡೆ ಗಮನ ಹರಿಸಿದ್ದಾರೆ. ಇದರ ನಡುವೆ ಲಗಾನ್​ ಸಿನಿಮಾ ಖ್ಯಾತಿಯ ಬಾಲಿವುಡ್​ ನಿರ್ದೇಶಕ ಆಶುತೋಷ್​ ಗೋವಾರಿಕರ್ ಅವರನ್ನು ಭೇಟಿಯಾಗಿರುವ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ರಿಷಬ್​ ಮತ್ತು ಆಶುತೋಷ್​ ಗೋವಾರಿಕರ್ ಸಿನಿಮವೊಂದಕ್ಕೆ ಜತೆಯಾಗಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷ ಸೆಪ್ಟೆಂಬರ್​ನಿಂದಲೂ ಹರಿದಾಡುತ್ತಿದೆ. ಆದಾಗ್ಯೂ ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಿಷಬ್​ ಪ್ರಸ್ತುತ ನನ್ನ ಗಮನವೆಲ್ಲ ಕಾಂತಾರ ಪ್ರೀಕ್ವೆಲ್​ ಮೇಲಿದೆ ಎಂದಿದ್ದರು ಮತ್ತು ನಾನು ಯಾವುದನ್ನು ಚರ್ಚೆ ಮಾಡಿಲ್ಲ ಎಂದು ತಿಳಿಸಿದ್ದರು. ಆದರೀಗ ಆಶುತೋಷ್​ ಗೋವಾರಿಕರ್ ಅವರನ್ನು ಭೇಟಿಯಾಗಿರುವುದು ನಾನಾ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ಕಾಂತಾರ ಪ್ರೀಕ್ವೆಲ್​ ನಂತರ ಇದು ರಿಷಬ್ ಶೆಟ್ಟಿಯ ಮುಂದಿನ ಸಿನಿಮಾ ಪ್ರಾಜೆಕ್ಟ್​ ಆಗಿರಬಹುದೇ ಎಂಬ ಪ್ರಶ್ನೆಗೆ ಸೂಕ್ತ ಸಮಯದಲ್ಲಿ ಉತ್ತರ ಸಿಗಲಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಭೇಟಿಯ ಬಗ್ಗೆ ನಾನಾ ಚರ್ಚೆಗಳಾಗುತ್ತಿದ್ದು, ಯಾವುದೇ ಬಹುದೊಡ್ಡ ಯೋಜನೆಗೆ ರಿಷಬ್​ ಕೈಜೋಡಿಸಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಕಾಂತಾರ ಸಿನಿಮಾ ರಿಷಬ್ ವೃತ್ತಿ ಜೀವನಕ್ಕೆ ಮಹತ್ವದ ತಿರುವು ಕೊಟ್ಟ ಸಿನಿಮಾ. ಕಾಲಿವುಡ್​, ಟಾಲಿವುಡ್​, ಬಾಲಿವುಡ್​ ಸೇರಿದಂತೆ ಎಲ್ಲ ಚಿತ್ರರಂಗದವರು ಕೂಡ ಕಾಂತಾರ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡಿದರು. ಪ್ರಧಾನಿ ಮೋದಿ ಅವರು ಸಹ ಕಾಂತಾರ ಬಗ್ಗೆ ಮಾತನಾಡಿದರು. ಆರಂಭದಲ್ಲಿ ಕನ್ನಡ ಚಿತ್ರವಾಗಿ ಬಿಡುಗಡೆಯಾದ ಕಾಂತಾರ ಪ್ಯಾನ್​ ಇಂಡಿಯಾವಾಗಿ ಬದಲಾಗಿದ್ದೆ ರೋಚಕ. ಆ ಮಟ್ಟಿಗೆ ಕನ್ನಡ ಚಿತ್ರವೊಂದು ಸದ್ದು ಮಾಡಿದ್ದು ಇದೇ ಮೊದಲು ಎನ್ನಬಹುದು.

ಅಂದಹಾಗೆ ಈ ಸಿನಿಮಾವನ್ನು ಸ್ವತಃ ರಿಷಬ್​ ಅವರೇ ನಿರ್ದೇಶನ ಮಾಡಿದರು. ಹೊಂಬಾಳೆ ಫಿಲ್ಸ್​ ನಿರ್ಮಾಣ ಮಾಡಿತು. ಇದೀಗ ಕಾಂತಾರ ಪ್ರೀಕ್ವೆಲ್​ ಅನ್ನು ಅದ್ಧೂರಿಯಾಗಿ ತೆರೆಗೆ ತರಲು ಚಿತ್ರತಂಡ​ ಸಕಲ ತಯಾರಿಯನ್ನು ಮಾಡಿಕೊಳ್ಳುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net