

ಚಿತ್ರ: ಕಾಂತಾರ ಅಧ್ಯಾಯ 1
ನಿರ್ದೇಶನ: ರಿಷಬ್ ಶೆಟ್ಟಿ
ನಿರ್ಮಾಣ: ಹೊಂಬಾಳೆ ಫಿಲಂಸ್
ತಾರಾಗಣ: ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ, ಬಲರಾಜವಾಡಿ ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
"ಕಾಂತಾರ' ಗೆದ್ದು ಅದರ ಪ್ರೀಕ್ವೆಲ್ ಘೋಷಣೆ ಆದಾಗಿನಿಂದಲೂ "ಅಧ್ಯಾಯ 1'ರ ಬಗ್ಗೆ ಎಲ್ಲಿಲ್ಲದ ಕುತೂಹಲವಿತ್ತು. ಇದು ಕದಂಬರ ಕಾಲಘಟ್ಟದ ಕಥೆಯಂತೆ, ಪರಶುರಾಮನ ಕುರಿತ ಸ್ಟೋರಿಯಂತೆ ಎಂದೆಲ್ಲ ಅಂತೆ-ಕಂತೆಗಳು ಹರಿದಾಡುತ್ತಿದ್ದವು. ಹಾಗೇ ಕರಾವಳಿ ದೈವಗಳು ಸೃಷ್ಟಿಯಾಗಿದ್ದು ಹೇಗೆ? ಕಾರಣವೇನು? ಎಂದು ತಿಳಿದುಕೊಳ್ಳುವ ಕುತೂಹಲವೂ ಪ್ರೇಕ್ಷಕರಲ್ಲಿತ್ತು. ಆ ಎಲ್ಲ ಕುತೂಹಲಗಳಿಗೂ "ಕಾಂತಾರ ಅಧ್ಯಾಯ 1'ರ ಮೂಲಕ ರಿಷಬ್ ಶೆಟ್ಟಿ ಉತ್ತರ ನೀಡಿದ್ದಾರೆ. ಜತೆಗೆ ಒಂದಷ್ಟು ಹೊಸ ಕೌತುಕಗಳನ್ನೂ ಸೃಷ್ಟಿಸಿದ್ದಾರೆ!
ಕಥೆಯಲ್ಲೇನಿದೆ?
ರಾಜಶೇಖರ (ಜಯರಾಮ್) ಬಾಂಗ್ರ ಸಾಮ್ರಾಜ್ಯದ ದೊರೆ. ಆತನಿಗೆ ಇಬ್ಬರು ಮಕ್ಕಳು. ಕುಲಶೇಖರ (ಗುಲ್ಶನ್), ಕನಕವತಿ (ರುಕ್ಮಿಣಿ). ತಾನು ಮಗನಿಗೆ ಪಟ್ಟಾಭಿಷೇಕ ಮಾಡಿಸುವ ರಾಜಶೇಖರ, ಆಡಳಿತದ ಚುಕ್ಕಾಣಿಯನ್ನು ಕುಲಶೇಖರನಿಗೆ ಹಸ್ತಾಂತರಿಸುತ್ತಾನೆ. ಮಗನೋ ಶುದ್ಧ ಅಹಂಕಾರಿ, ಅವಿವೇಕಿ, ಬೇಜವಾಬ್ದಾರಿ ಯುವಕ. ಕೆಲ ಸೈನಿಕರ ಜತೆ ಕುಡಿದ ಅಮಲಿನಲ್ಲಿ ಕಾಂತಾರಕ್ಕೆ ಕಾಲಿಡುತ್ತಾನೆ. ಅದರ ನಾಯಕ ಜಪ್ಪಣ್ಣ (ಬಲರಾಜವಾಡಿ). ಆದರೆ, ಬೆರ್ಮೆ (ರಿಷಬ್) ಕಾಂತಾರದ ಅಘೋಷಿತ ನಾಯಕ. ಈಶ್ವರನ ಹೂದೋಟದಲ್ಲಿ ಅನಾಥ ಮಗುವಾಗಿ ಸಿಕ್ಕ ಬೆರ್ಮೆಯನ್ನು ಕಾಂತಾರದವರೇ ಸಾಕಿರುತ್ತಾರೆ. ಬೆರ್ಮೆ ಕೈಗೆ ಸಿಕ್ಕು ಬಾಂಗ್ರದ ಸೈನಿಕರು ಮಣ್ಣಾಗುತ್ತಾರೆ. ಬಾಂಗ್ರದವರು ಕಾಂತಾರಕ್ಕೆ ಬಂದಿದ್ದಾರೆ, ಕಾಂತಾರದವರು ಬಾಂಗ್ರಕ್ಕೆ ಯಾಕೆ ಹೋಗಬಾರದು? ಎಂದು ತನ್ನ ಪಟಾಲಂ ಕಟ್ಟಿಕೊಂಡು ಬೆರ್ಮೆ ಬಾಂಗ್ರಗೆ ನುಗ್ಗುತ್ತಾನೆ. ಅಲ್ಲಿ ಕಾಂತಾರದವರ ಬಂಧನವಾಗುತ್ತದೆ. ಜತೆಗೆ ಕಾಂತಾರದಲ್ಲಿರುವ ಈಶ್ವರನ ಹೂದೋಟ ಮತ್ತು ಅಲ್ಲಿರುವ ಕಾರ್ಣಿಕ ಕಲ್ಲುಗಳ ಮೇಲೆ ಬಾಂಗ್ರದವರಿಗೆ ಆಸಕ್ತಿ ಮೂಡುತ್ತದೆ. ಜತೆಗೆ ಕಡಬದ ಕಡೆಯವರಿಗೂ ಕಾಂತಾರದ ಮೇಲೆ ವಕ್ರದೃಷ್ಟಿ ಬೀಳುತ್ತದೆ. ಹಾಗಾದರೆ ಬೆರ್ಮೆ ಈಶ್ವರನ ಹೂದೋಟವನ್ನು ಬಾಂಗ್ರ ಮತ್ತು ಕಡಬದ ಕಡೆಯವರಿಂಗ ಹೇಗೆ ರಸುತ್ತಾನೆ? ಕಾಂತಾರದ ಮೇಲೇಕೆ ಅವರಿಗೆ ಸಿಟ್ಟು? ಅಷ್ಟಕ್ಕೂ ಈ ಬೆರ್ಮೆ ಯಾರು? ತಿಳಿಯಲು ಸಿನಿಮಾ ನೋಡಿ.
ಏಕೆ ನೋಡಬೇಕು?
"ಕಾಂತಾರ'ಕ್ಕಿಂತ ಈ ಪ್ರೀಕ್ವೆಲ್ ಬಜೆಟ್, ಮೇಕಿಂಗ್, ದೈವಗಳು, ಪಾತ್ರಗಳು, ವಿಎಫ್ಎಕ್ಸ್... ಹೀಗೆ ಎಲ್ಲ ವಿಷಯಗಳಲ್ಲೂ ಹಲವು ಪಟ್ಟು ದೊಡ್ಡ ಮಟ್ಟದಲ್ಲಿ ಮೂಡಿಬಂದಿದೆ. ಹೀಗಾಗಿಯೇ, ಬೆಳ್ಳಿತೆರೆಯ ಮೇಲೆ ಮೂಡಿಬರುವ ದೃಶ್ಯವೈಭವವೂ ಪ್ರೇಕ್ಷಕರ ಮೇಲೆ ಅಷ್ಟೇ ಗಾಢವಾದ ಪರಿಣಾಮ ಬೀರುತ್ತದೆ. ಅದರಲ್ಲೂ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಮನೋಜ್ಱ ಅಭಿನಯ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಅಜನೀಷ್ ಲೋಕನಾಥ್ ಹಿನ್ನೆಲೆ ಸಂಗೀತ ಮತ್ತು ಅರ್ಜುನ್ ನಿರ್ದೇಶನದ ಮೈನವಿರೇಳಿಸುವ ಸಾಹಸ ಸನ್ನಿವೇಶಗಳು ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ. ದೈವಿಕ ಅಂಶಗಳು, ಆ್ಯಕ್ಷನ್, ಡ್ರಾಮಾ, ಥ್ರಿಲ್ಲರ್, ಮಿಸ್ಟರಿ, ಫ್ಯಾಂಟಸಿ, ರೊಮ್ಯಾನ್ಸ್, ಅಮ್ಮ-ಮಗ, ಅಪ್ಪ-ಮಕ್ಕಳ ಸೆಂಟಿಮೆಂಟ್... ಹೀಗೆ ಔಟ್ ಆ್ಯಂಡ್ ಔಟ್ ಮನರಂಜನೆಯ ಪ್ಯಾಕೇಜ್ ಚಿತ್ರದಲ್ಲಿದೆ. ಮೊದರ್ಲಧ ಹಳೆಯ ಕಥೆ ಅಂತನ್ನಿಸಿದರೂ, ದ್ವೀತಿಯಾರ್ಧ "ಕಾಂತಾರ'ದ ಫ್ಯಾಂಟಸಿ ಲೋಕ ತೆರೆದುಕೊಂಡು, ಪ್ರೇಕ್ಷಕರನ್ನು ಮತ್ತೊಂದು ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಮೊದಲರ್ಧ ಒಂದು ಸಿನಿಮಾ ನೋಡುತ್ತಿರುವ ಅನುಭವ ನೀಡಿದರೂ, ದ್ವಿತೀಯಾರ್ಧ ಸಿನಿಮಾದ ಹೊರತಾಗಿ ಯಾವುದೋ ಹೊಸ ಕಂಡು, ಕಾಣರಿಯದ ಹೊಸ ಲೋಕದಲ್ಲಿರುವ ವಿಶಿಷ್ಠ ಅನುಭವ ನೀಡುತ್ತದೆ. ಹಾಗೇ ಗುಳಿಗ ಪಂಜುರ್ಲಿ ದೈವಗಳನ್ನು ನೋಡಿದ್ದ ಪ್ರೇಕ್ಷಕರು ಈ ಬಾರಿ ರುದ್ರ ಗುಳಿಗ, ರಾಹು, ತಂತ್ರ, ಕತ್ತಲೆ ಕಾಣ, ನೆತ್ತರ, ಅಗ್ನಿ, ಸ್ವಾಮಿ ರಾಜ ಗುಳಿಗ, ಜತೆಗೆ ಬಿಗ್ಸ್ಕ್ರೀನ್ನಲ್ಲಿ ಚಾವುಂಡಿ ದೇವಿಯ ದರ್ಶನವನ್ನೂ ಪಡೆಯಬಹುದು.
ಮೈನಸ್ ಏನು?
ದೈವಿಕ ಅಂಶಗಳಿರುವ ಕಾಂತಾರ ಸಿನಿಮಾ ಪೌರಾಣಿಕ ಕಥೆಯಾದರೂ, ಐತಿಹಾಸಿಕವಾಗಿ ನಡೆದ ಘಟನೆಯೆಂದು ನಂಬಿರುವ ಲಕ್ಷಾಂತರ ಭಕ್ತರಿದ್ದಾರೆ. ಹೀಗಿರುವಾಗ ವಿವಾಹಿತ ಪುರುಷನೊಬ್ಬ ಮತ್ತೊಬ್ಬ ಯುವತಿಯೊಂದಿಗೆ ಓಡಿಹೋಗುವ ಒತ್ತಾಯಪೂರ್ವಕ ಕಾಮಿಡಿ ಯ ಅವಶ್ಯಕತೆ ಈ ಚಿತ್ರಕ್ಕಿರಲಿಲ್ಲ. ಹಿನ್ನೆಲೆ ಸಂಗೀತ ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗಿಸಿದರೂ, ಮೈಮ್ ರಾಮದಾಸ್ ಹಾಡಿರುವ ಒಂದು ಹಾಡನ್ನು ಹೊರತುಪಡಿಸಿ, ಬೇರೆ ಹಾಡುಗಳು ಹತ್ತಿರ ಅನ್ನಿಸುವುದಿಲ್ಲ. ಚಿತ್ರದಾದ್ಯಂತ ಒನ್ ಮ್ಯಾನ್ ಆರ್ಮಿಯಂತೆ ರಿಷಬ್ ಮಿಂಚಿದ್ದಾರೆ. ಆದರೂ, ಚಾವುಂಡಿಯ ಅವತಾರವನ್ನು ಮತ್ತಷ್ಟು ವೈಭವೀಕರಿಸಬಹುದಿತ್ತು. 169 ನಿಮಿಷ ಸ್ವಲ್ಪ ಸುದೀರ್ಘ ಅಂತನ್ನಿಸುತ್ತದೆ. ಮೊದಲರ್ಧದಲ್ಲಿ ರಥದ ಮೇಲಿನ ಆ್ಯಕ್ಷನ್ ಸನ್ನಿವೇಶ ಹೊರತುಪಡಿಸಿದರೆ, ಹಲವೆಡೆ ಕತ್ತರಿ ಪ್ರಯೋಗಿಸಲು ಅವಕಾಶವಿತ್ತು. ಹೀಗೆ ಕೆಲ ಕೊರತೆಗಳ ನಡುವೆಯೂ ಕಾಂತಾರ ಒಂದು ಅದ್ಭುತ ದೃಶ್ಯಕಾವ್ಯ ಎಂಬುದನ್ನು ಒಪ್ಪಿಕೊಳ್ಳಲೇಬೇಕು.