'ಪ್ರಗತಿ'ಯ ಹೊಳಪಲ್ಲಿ ರಿಷಬ್​ ಶೆಟ್ಟಿ; ಹಳೇದನ್ನೆಲ್ಲ ನೆನಪಿಸಿಕೊಂಡು ಆ ಮೊದಲ ಫೋಟೋ ಹಂಚಿಕೊಂಡ ನಟ-ನಿರ್ದೇಶಕ

Rishab
Published on

ಬೆಂಗಳೂರು: 'ಕಾಂತಾರ' ಒಂದೇ ಸಿನಿಮಾದಿಂದ ಭರ್ಜರಿ ಜನಮನ್ನಣೆ, ಜನಪ್ರಿಯತೆಗೆ ಪಾತ್ರರಾದ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಇದೀಗ ಅದೇ ಜನರಿಗೆ ಧನ್ಯವಾದಗಳನ್ನು ತಿಳಿಸುವ ಸಲುವಾಗಿ ದೇಶಾದ್ಯಂತ ಸಂಚಾರ ನಡೆಸುತ್ತಿದ್ದಾರೆ. ತಮ್ಮ ವೃತ್ತಿಜೀವನದ ಉನ್ನತಿಯ ಜತೆಗೆ ವೈಯಕ್ತಿಕ ಜೀವನದ 'ಪ್ರಗತಿ'ಯ ಬಗ್ಗೆಯೂ ರಿಷಬ್​ ಈ ಸಂದರ್ಭದಲ್ಲಿ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಕಾಂತಾರ ಸಿನಿಮಾ ಗೆದ್ದ ಖುಷಿಯಲ್ಲಿ ರಿಷಬ್​ ಚಾರ್ಟರ್ಡ್​ ಫ್ಲೈಟ್​ ಹತ್ತಿ ಬೆಂಗಳೂರಿನಿಂದ ಕೊಚ್ಚಿನ್​ಗೆ ಹೊರಟು, ಅಲ್ಲಿಂದ ಚೆನ್ನೈ, ತಿರುಪತಿ, ವಿಶಾಖಪಟ್ಟಣ ಮತ್ತು ಮುಂಬೈಗೆ ಹೋಗಿದ್ದಾರೆ. ಭೇಟಿ ನೀಡಿದ ನಗರಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾತನಾಡುವುದರ ಜತೆಗೆ, ಚಿತ್ರ ಗೆಲ್ಲಿಸಿದ ಜನರಿಗೆ ಅಭಿನಂದನೆಗಳನ್ನೂ ತಿಳಿಸಿದ್ದಾರೆ.

ಬರೀ ಸುದ್ದಿಗೋಷ್ಠಿಗಳನ್ನು ನಡೆಸುವುದಷ್ಟೇ ಅಲ್ಲದೇ, ಭೇಟಿ ನೀಡಿದ್ದ ಸ್ಥಳಗಳಲ್ಲಿ ಪ್ರಮುಖ ದೇವಸ್ಥಾನಗಳಿಗೂ ಹೋಗಿ ದೇವರ ಆಶೀರ್ವಾದ ಪಡೆದಿದ್ದಾರೆ. ಈ ಮಧ್ಯೆ ಪತ್ನಿ ಪ್ರಗತಿ ಶೆಟ್ಟಿ ಜತೆ ಚಾರ್ಟರ್ಡ್ ಫ್ಲೈಟ್ ಮುಂದೆ ನಿಂತು ತೆಗೆಸಿಕೊಂಡ ಫೋಟೋ ಹಂಚಿಕೊಂಡ ಅವರು, ಆಕೆಗೂ ಧನ್ಯವಾದವನ್ನು ತಿಳಿಸಿದ್ದಾರೆ.

ತಮ್ಮ ನಿರ್ದೇಶನದ ಮೊದಲ ಸಿನಿಮಾ ರಿಕ್ಕಿ ತೆರೆ ಕಂಡ ಸಂದರ್ಭದಲ್ಲಿ ಪ್ರಗತಿಯನ್ನು ಮೊದಲ ಸಲ ಭೇಟಿಯಾಗಿದ್ದಾಗ ತೆಗೆದುಕೊಳ್ಳಲಾಗಿದ್ದ ಫೋಟೋ ಕೂಡ ಇದರ ಜತೆ ಹಂಚಿಕೊಂಡಿರುವ ರಿಷಬ್​ ಶೆಟ್ಟಿ, ಹಳೆಯದನ್ನೆಲ್ಲ ನೆನಪಿಸಿಕೊಂಡಿದ್ದಾರೆ.

ನಮ್ಮ ಮೊದಲ ಭೇಟಿಯಿಂದ ಈ ಕ್ಷಣದವರೆಗೆ ನೀನು ನನ್ನ ಜಗತ್ತನ್ನು ಬೆಳಗಿಸಿದ್ದಿ ಮತ್ತು ನೀನು ನನ್ನ ಜೊತೆಗಿರುವ ಮೂಲಕ ನನ್ನ ಭವಿಷ್ಯವನ್ನೂ ಉಜ್ವಲಗೊಳಿಸುತ್ತಿದ್ದಿ ಎಂದು ತನ್ನೆಲ್ಲ ಯಶಸ್ಸಿನಲ್ಲಿ ಪತ್ನಿಯ ಪಾತ್ರವನ್ನೂ ಸ್ಮರಿಸಿಕೊಂಡಿರುವ ರಿಷಬ್​, ನನ್ನ ಜೊತೆಯಾಗಿ ಬೆನ್ನೆಲುಬಾಗಿ ನಿಂತಿರುವುದಕ್ಕೆ ಥ್ಯಾಂಕ್ಯೂ ಯೂ ಎಂದು ಪತ್ನಿಗೆ ಸೋಷಿಯಲ್ ಮೀಡಿಯಾ ಮೂಲಕವೂ ಧನ್ಯವಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net