

ಬೆಂಗಳೂರು: ಸಾಮಾನ್ಯವಾಗಿ ಮುಂಬೈ ಅಂಡರ್ವರ್ಲ್ಡ್ ಎಂದಾಕ್ಷಣ ಅಲ್ಲಿ ‘ಶೆಟ್ಟಿ ಲೋಗ್’ ಎಂಬ ಮಾತು ಕೇಳಿಬರುವುದು ಸಹಜ. ಇದೀಗ ಮಂಗಳೂರಿನ ಅಂಡರ್ವರ್ಲ್ಡ್ನಲ್ಲೂ ಶೆಟ್ಟಿ ಲೋಗ್ ಹೆಸರು ಕೇಳಿಬರಲಾರಂಭಿಸಿದೆ. ಅಷ್ಟಕ್ಕೇ ಯಾರೂ ಬೆಚ್ಚಿ ಬೀಳಬೇಕಾಗಿಲ್ಲ. ಏಕೆಂದರೆ ಈ ಅಂಡರ್ವರ್ಲ್ಡ್ ರಿಯಲ್ ಅಲ್ಲ, ರೀಲ್. ಅರ್ಥಾತ್, ಮಂಗಳೂರು ಭೂಗತ ಜಗತ್ತಿನ ಕುರಿತ ಕಥೆ ಇರುವ ‘ಗರುಡ ಗಮನ, ವೃಷಭ ವಾಹನ’ ಸಿನಿಮಾದಲ್ಲಿ ನಿರ್ದೇಶಕರಾದ ರಾಜ್ ಬಿ. ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ರೌಡಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ರಾಜ್ ಬಿ. ಶೆಟ್ಟಿ ಅವರೇ ಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಾಜ್ ಹಾಗೂ ರಿಷಬ್ ಇಬ್ಬರೂ ರೌಡಿಸ್ನೇಹಿತರಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ‘ಇದು ವಿಷ್ಣು ಹಾಗೂ ಶಿವ ಹಿನ್ನೆಲೆಯಲ್ಲಿ ಹೆಣೆದಿರುವ ಕಥೆ. ಒಂದು ಪಾತ್ರ ವಿಷ್ಣುವಿನ ಹಾಗೂ ಇನ್ನೊಂದು ಪಾತ್ರ ಶಿವನ ಗುಣಗಳನ್ನು ಹೊಂದಿರುವುದರಿಂದ ಈ ರೀತಿಯ ಟೈಟಲ್ ಇಡಲಾಗಿದೆ. ಮೊದಲು ‘ಹರಿಹರ’ ಎಂಬ ಶೀರ್ಷಿಕೆ ಇಡಬೇಕು ಎಂದುಕೊಂಡಿದ್ದರೂ ಅದು ತುಂಬ ಸಿಂಪಲ್ ಅನಿಸಿದ ಕಾರಣಕ್ಕೆ ‘ಗರುಡ ಗಮನ, ವೃಷಭ ವಾಹನ’ ಎಂಬ ಟೈಟಲ್ ಇಡಲಾಗಿದೆ’ ಎಂಬ ವಿವರಣೆ ನೀಡಿದರು ನಿರ್ದೇಶಕ ರಾಜ್ ಶೆಟ್ಟಿ.
‘ಪರಿಸ್ಥಿತಿಯ ಸುಳಿಗೆ ಸಿಲುಕಿ ರೌಡಿಗಳಾದ ಇಬ್ಬರು ಸ್ನೇಹಿತರ ಕಥೆಯನ್ನು ಇಲ್ಲಿ ಹೇಳಲಾಗಿದೆ. ಇದರಲ್ಲಿ ಪಕ್ಕಾ ಮಂಗಳೂರು ಭೂಗತ ಜಗತ್ತು ಕಥಾವಸ್ತುವಾಗಿದ್ದರೂ ಇದೊಂದು ಕಾಲ್ಪನಿಕ ಕಥೆ. ವಿಶೇಷವೆಂದರೆ ಇಲ್ಲಿ ಹೀರೋಯಿನ್ಸ್ ಇಲ್ಲ ಹಾಗೂ ಚಿತ್ರದುದ್ದಕ್ಕೂ ಮಂಗಳೂರು ಕನ್ನಡ ಪ್ರಧಾನವಾಗಿರುತ್ತದೆ. ಗೋಪಾಲಕೃಷ್ಣ ದೇಶಪಾಂಡೆ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ಇನ್ನುಳಿದ ಪಾತ್ರಗಳಲ್ಲಿ ಹೊಸಬರೇ ಅಭಿನಯಿಸಿದ್ದಾರೆ’ ಎಂದರು ರಾಜ್. ಸ್ನೇಹಿತರೊಂದಿಗೆ ಸೇರಿ ‘ಲೈಟ್ರ್ ಬುದ್ಧ ಫಿಲಂಸ್’ ಎಂಬ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿರುವ ರಾಜ್ ಶೆಟ್ಟಿ, ಈ ಬ್ಯಾನರ್ನ ಮೊದಲ ಚಿತ್ರವಾಗಿ ‘ಗರುಡ ಗಮನ ವೃಷಭ ವಾಹನ’ ನಿರ್ವಿುಸಿದ್ದಾರೆ.