

ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಬರ್ಗೆಟ್ ಬಸ್ಯಾ’ ಸಿನಿಮಾ ಸೆನ್ಸಾರ್ ಪಾಸ್ ಆಗಿದೆ. ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಪ್ರಯರು ಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಚಿತ್ರತಂಡದವರು ಸಂಭ್ರಮಿಸಿದ್ದಾರೆ. ರಿಶ್ ಹಿರೇಮಠ್ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿರುವ ಚಿತ್ರವಿದು. ಡೈರಕ್ಷನ್ ಕೋರ್ಸ್ ಮುಗಿಸಿದ ನಂತರ ಕೆಲವು ನಿರ್ದೇಶಕರ ಬಳಿ ಕೆಲಸ ಕಲಿತು ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ರಿಶ್, ಬರ್ಗೆಟ್ ಬಸ್ಯಾ ಮೂಲಕ ನಾಯಕ, ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರಿಗೆ ಚಿತ್ರದಲ್ಲಿ ಸಂಗೀತ.ಎನ್.ಸ್ವಾಮಿ ನಾಯಕಿಯಾಗಿದ್ದಾರೆ.
ಕಂಡಕಂಡ ಹುಡುಗಿಯರನ್ನೆಲ್ಲ ಲವ್ ಮಾಡಿ ಅಂತ ಬರ್ಗೆಟ್ ಬಸ್ಯಾ ಹಿಂದೆ ಬೀಳುತ್ತಿರುತ್ತಾನೆ. ಆತನ ಜೀವನದ ಸುತ್ತ ಸಂಪೂರ್ಣ ಹಾಸ್ಯಮಯ ಕಥೆ ಹೇಳುವ ಪ್ರಯತ್ನ ರಿಶ್ ಅವರದು. ನಲವತ್ತು ಹುಡುಗಿಯರು ಬಸ್ಯನ ಜೀವನದಲ್ಲಿ ಹೇಗೆ ಬಂದು ಹೋಗುತ್ತಾರೆ? ಅವರಿಂದ ಬಸ್ಯಾ ಏನೆಲ್ಲಾ ಕಳೆದುಕೊಳ್ಳುತ್ತಾನೆ? ಪಡೆದುಕೊಳ್ಳುತ್ತಾನೆ ಎಂಬುದೇ ಚಿತ್ರದ ತಿರುಳು. ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ, ಬೆನಗನಹಳ್ಳಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ.
ಚಿತ್ರಕ್ಕೆ ಪ್ರಕಾಶ್.ಜಿ ಸಾಹಿತ್ಯಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶಾಮ್‌ಸಾಲ್ವಿನ್, ಸಂಕಲನ ಸಿದ್ದು ದಳವಾಯಿ ಅವರದಾಗಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ತರಲು ತಂಡ ಯೋಜನೆ ರೂಪಿಸಿಕೊಂಡಿದೆ.