ಪಾಯಲ್​ ಮೇಲೆ ಒಂದು ಕೋಟಿ ಮಾನನಷ್ಟ ಕೇಸ್​ ಹಾಕಿದ ರಿಚಾ ...

Richa - Payal
Published on

ಮುಂಬೈ: ತಮ್ಮ ಹೆಸರಿಗೆ ಮಸಿ ಬಳಿಯುವುದಕ್ಕೆ ಏನಾದರೂ ಬಂದರೆ, ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪಾಯಲ್​ ಘೋಶ್​ ವಿರುದ್ಧ ರಿಚಾ ಚಡ್ಡಾ ಎಚ್ಚರಿಸಿದ್ದರು. ಇದೀಗ ಅವರು ಆ ಎಚ್ಚರಿಕೆಯನ್ನು ನಿಜ ಮಾಡಿ ತೋರಿಸಿದ್ದಾರೆ.

ಮುಂಬೈ ಹೈಕೋರ್ಟ್​ನಲ್ಲಿ ಪಾಯಲ್​ ವಿರುದ್ಧ ಮಾನನಷ್ಟ ಮೊಕ್ಕದ್ದಮೆಯನ್ನು ರಿಚಾ ಹೂಡಿದ್ದಾರೆ. ಯಾವ್ಯಾವುದೋ ವಿಚಾರಕ್ಕೆ ತಮ್ಮನ್ನು ಎಳೆದು ತಂದಿರುವುದರ ಜತೆಗೆ, ಹೆಸರಿಗೆ ಮಸಿ ಬಳಿಯುವುದಕ್ಕೆ ಪ್ರಯತ್ನಿಸಿದ್ದಿಕ್ಕೆ ಒಂದು ಕೋಟಿ ಒಂದು ಲಕ್ಷ ರೂಪಾಯಿಗಳನ್ನು ಕಟ್ಟಿಕೊಡಬೇಕು ಎಂದು ಕೇಸ್​ ಹಾಕಿದ್ದಾರೆ.

ಬರೀ ಪಾಯಲ್​ ಘೋಶ್​ ಮಾತ್ರವಲ್ಲ, ನಟ ಕಮಾಲ್​ ಖಾನ್​ ಮತ್ತು ಒಂದು ಖಾಸಗಿ ಸುದ್ದಿವಾಹಿನಿಯ ಮೇಲೂ ಅವರು ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣವು ಬುಧವಾರ ಮುಂಬೈ ಹೈಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದೆ.

ಇದಕ್ಕೂ ಮುನ್ನ ಪಾಯಲ್​ ಘೋಶ್​, ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಈ ಸಂದರ್ಭದಲ್ಲಿ ಅನುರಾಗ್​ ಕಶ್ಯಪ್​ ಖುದ್ದು ತಮ್ಮ ಬಳಿ ತಮಗೆ ನಟಿಯರಾದ ರಿಚಾ ಚಡ್ಢಾ, ಮಾಹಿ ಗಿಲ್​ ಮತ್ತು ಹ್ಯೂಮಾ ಖುರೇಷಿ ಮುಂತಾದವರು ಸಹಕರಿಸಿದ್ದಾಗಿ ಹೇಳಿಕೊಂಡಿದ್ದರು.

ಪಾಯಲ್​ ತಮ್ಮ ಹೆಸರನ್ನು ಈ ವಿಷಯದಲ್ಲಿ ಅನವಶ್ಯಕವಾಗಿ ಎಳೆದು ತರುತ್ತಿರುವುದರ ಬಗ್ಗೆ ರಿಚಾ ಈ ಮೊದಲು ಕಿಡಿಕಾರಿದ್ದರು. ಅಷ್ಟೇ ಅಲ್ಲ, ಪಾಯಲ್​ ಮೇಲೆ ಇದೀಗ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಯೋಚಿಸುತ್ತಿರುವುದಾಗಿ ಹೇಳಿದ್ದರು. ಅದಕ್ಕೆ ಸರಿಯಾಗಿ ಇದೀಗ ಪಾಯಲ್​ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ರಿಚಾ ಹೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net