

‘ರೈಮ್ಸ್'- ಈ ಹೆಸರು ಕೇಳಿದಾಕ್ಷಣ ಮಕ್ಕಳ ಚಿತ್ರ ಎಂಬ ಆಲೋಚನೆ ಮೂಡುವುದು ಸಹಜ. ಆದರೆ ಇದು ಕ್ರೖೆಂ-ಸಸ್ಪೆನ್ಸ್ ಸಿನಿಮಾ. ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಮುಗಿದಿದೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅಜಿತ್ ಕುಮಾರ್ ‘ರೈಮ್ಸ್’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶಕ ಆಗಿದ್ದಾರೆ. ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಚಿತ್ರದ ಫಸ್ಟ್ಲುಕ್ ಹಾಗೂ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಮಾಧ್ಯಮದ ಮುಂದೆ ಬಂದಿತ್ತು ಚಿತ್ರತಂಡ.
ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ನಿರ್ದೇಶಕ ಅಜಿತ್ ಕುಮಾರ್, ‘ಇದು ಕೊಲೆ ತನಿಖೆ ಸುತ್ತ ನಡೆಯುವ ಕಥೆ. ಈ ಹಿಂದೆ ಕ್ರೖೆಂ ಕಥೆ ಆಧಾರಿತ ಅನೇಕ ಸಿನಿಮಾಗಳು ಬಂದಿದ್ದರೂ ಅವುಗಳಿಗಿಂತ ‘ರೈಮ್ಸ್’ ಭಿನ್ನ. ಚಿತ್ರ ಹೊಸತನದಿಂದ ಕೂಡಿದ ಕಥೆ ಒಳಗೊಂಡಿದೆ. ಇಲ್ಲಿ ಹಾಡು-ಫೈಟ್ ಇಲ್ಲ..’ ಎಂದು ಹೇಳುವ ನಿರ್ದೇಶಕರು, ಶೀರ್ಷಿಕೆ ಬಗ್ಗೆ ತಿಳಿಯಲು ಸಿನಿಮಾ ನೋಡಬೇಕು ಎನ್ನುತ್ತಾರೆ.
‘ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕರು ಹೊಸಬರೇ. ಆದರೆ ಪ್ರತಿಯೊಬ್ಬರೂ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಎಲ್ಲರ ಪ್ರಯತ್ನದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಕಥೆ ಎಲ್ಲರಿಗೂ ಇಷ್ಟ ಆಗುತ್ತದೆ’ ಎಂಬ ವಿಶ್ವಾಸ ನಿರ್ದೇಶಕರದ್ದು. ‘ಕೊಲೆಗಾರರನ್ನು ಪತ್ತೆ ಹಚ್ಚುವ ತನಿಖಾಧಿಕಾರಿ ಪಾತ್ರ ನನ್ನದು. ಬೇರೆ ಸಿನಿಮಾಗಳ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಒಳ್ಳೆಯ ಚಿತ್ರಕಥೆ ಜತೆಗೆ ನಮ್ಮ ಪಾತ್ರ ಕೂಡ ಉತ್ತಮ ಅನಿಸಿ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ.
ಬ್ರೇನ್ ಗೇಮ್ ಕುರಿತ ಪಾತ್ರ ಆಗಿದ್ದರಿಂದ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಚಿತ್ರ ಹೊಸ ಅನುಭವ ನೀಡಿದೆ’ ಎಂದರು ನಟ ಅಜಿತ್ ಜಯರಾಜ್. ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿದ ಅನುಭವ ಇರುವ ಸುಷ್ಮಾ ನಾಯರ್ ಈ ಚಿತ್ರದ ನಾಯಕಿ.
‘ಇನ್ಸ್ಪೆಕ್ಟರ್ ಹೆಂಡತಿ ಆಗಿ ಅಭಿನಯಿಸಿದ್ದೇನೆ. ವರದಿಗಾರ್ತಿ ಪಾತ್ರ ನನ್ನದು’ ಎನ್ನುತ್ತಾರೆ. ‘ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಒತ್ತು ಕೊಡಲಾಗಿದೆ’ ಎಂದು ಸಂಗೀತ ನಿರ್ದೇಶಕ ಶಕ್ತಿ ಮಾತನಾಡಿದರು. ನಟಿ ಅಭಿನಯ ಚಿತ್ರದ ಅನುಭವ ಹಂಚಿಕೊಂಡರು. ಹಿರಿಯ ನಟಿ ಭವ್ಯಾ, ಮಿಮಿಕ್ರಿ ಗೋಪಿ, ಅರ್ಪಣಾ ಪ್ರಮುಖ ತಾರಾವರ್ಗದಲ್ಲಿದ್ದಾರೆ. ಜ್ಞಾನಶೇಖರ್ ಮತ್ತು ರಮೇಶ್ ಆರ್ಯ ಬಂಡವಾಳ ಹಾಕಿದ್ದು, ಇವರಿಗೆ ಸ್ನೇಹಿತರು ಕೂಡ ನೆರವಾಗಿದ್ದಾರೆ. ಅರ್ಜುನ್ ಅಕೋಟ್ ಛಾಯಾಗ್ರಹಣ ಚಿತ್ರಕ್ಕಿದೆ.