

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸಿನಲ್ಲಿ, ಕಳೆದ ಕೆಲವು ದಿನಗಳಿಂದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಯವರು (ಎನ್ಸಿಬಿ) ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಅವರನ್ನು ಗ್ರಿಲ್ ಮಾಡುತ್ತಲೇ ಇದ್ದಾರೆ. ಈ ಮಧ್ಯೆ, ಡ್ರಗ್ಸ್ ತೆಗೆದುಕೊಳ್ಳುತ್ತಿರುವ 25 ಬಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳನ್ನು ರಿಯಾ ಹೇಳಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
ಬಾಲಿವುಡ್ನಲ್ಲಿ ನಶೆಯ ಜಾಲ ಬಹಳ ಆಳಕ್ಕೆ ಬೇರೂರಿದ್ದು, ಬಹಳಷ್ಟು ಸೆಲೆಬ್ರಿಟಿಗಳು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇದೆ. ಹೀಗಿರುವಾಗ, ತನಿಖೆ ವೇಳೆಯಲ್ಲಿ ರಿಯಾ 25 ಜನರ ಹೆಸರುಗಳನ್ನು ಹೇಳಿದ್ದಾರೆ ಎನ್ನಲಾಗಿದೆ.
ಈ ಪಟ್ಟಿಯಲ್ಲಿ ಬರೀ ನಟ-ನಟಿಯರಷ್ಟೇ ಅಲ್ಲ, ನಿರ್ದೇಶಕರು, ನಿರ್ಮಾಪರು ಮತ್ತು ಇತರೆ ತಂತ್ರಜ್ಱರು ಸಹ ಇದ್ದಾರೆ ಎಂದು ಹೇಳಲಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಎನ್ಸಿಬಿಯವರು ಇವರಿಗೆಲ್ಲಾ ಸಮನ್ಸ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬ ವಿಷಯವನ್ನು ಗೌಪ್ಯವಾಗಿಡಲಾಗಿದ್ದು, ಯಾರೆಲ್ಲಾ ಡ್ರಗ್ಸ್ ತೆಗೆದುಕೊಳ್ಳುತ್ತಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಕುತೂಹಲಕ್ಕೆ ಸದ್ಯದಲ್ಲೇ ತೆರೆಬೀಳುವ ಸಾಧ್ಯತೆಯೂ ಇದೆ.
ಸುಶಾಂತ್ ಸಿಂಗ್ ರಜಪೂತ್ ತಮ್ಮನ್ನು ಭೇಟಿಯಾಗುವುದಕ್ಕೆ ಮುನ್ನವೇ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಈ ಹಿಂದೆ ರಿಯಾ ಹೇಳಿದ್ದರು. ಅಷ್ಟೇ ಅಲ್ಲ, 'ಕೇದಾರನಾಥ್' ಚಿತ್ರದ ಚಿತ್ರೀಕರಣ ಸಂದರ್ಭದಲ್ಲೂ ಅವರು ಡ್ರಗ್ಸ್ ತೆಗೆದುಕೊಂಡಿದ್ದರು ಎಂದು ಆರೋಪಿಸಿದ್ದರು.
ಈಗ ಸುಶಾಂತ್ ಅಷ್ಟೇ ಅಲ್ಲ, ಬಾಲಿವುಡ್ನಲ್ಲಿ 25ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಡ್ರಗ್ಸ್ ಅಭ್ಯಾಸವಿದೆ ಮತ್ತು ಪಾರ್ಟಿಗಳಲ್ಲಿ ಅವರೆಲ್ಲಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರಿಂದ ಹಲವು ಉಪಯುಕ್ತ ಮಾಹಿತಿಯನ್ನು ಕಲೆಹಾಕಿರುವ ಎನ್ಸಿಬಿ, ಈ ನಿಟ್ಟಿನಲ್ಲಿ ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಸದ್ಯದಲ್ಲೇ ಈ ವಿಷಯವಾಗಿ ಹಲವರ ಮೇಲೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.