

ಕರೊನಾ ವೈರಸ್ ಇಡೀ ದೇಶಕ್ಕೆ ದೊಡ್ಡ ಸವಾಲಾಗಿದೆ. ಈ ಸೋಂಕು ಹರಡುವುದನ್ನು ತಡೆಗಟ್ಟುವುದಕ್ಕೆ ಏನು ಮಾಡಬೇಕು ಎಂದು ಸರ್ಕಾರಗಳೆಲ್ಲಾ ತಲೆ ಕೆಡಿಸಿಕೊಂಡಿವೆ. ಈ ಮಧ್ಯೆ ಸುಮಾರು ಎರಡು ವರ್ಷಗಳ ಹಿಂದೆಯೇ ವೈರಸ್ ಬಗ್ಗೆ ಒಂದು ಸಿನಿಮಾ ಮಾಡುವುದಕ್ಕೆ ಹೊರಟಿದ್ದರಂತೆ ಕಾಂಟ್ರೋವರ್ಷಿಯಲ್ ಡೈರೆಕ್ಟರ್ ಎಂದೇ ಜನಪ್ರಿಯರಾಗಿರುವ ರಾಮ್ ಗೋಪಾಲ್ ವರ್ಮ. ಈ ವಿಷಯವಾಗಿ ಅವರು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘ಒಂದು ಡೆಡ್ಲಿ ವೈರಸ್ ಹರುಡುವುದರ ಕುರಿತು ಚಿತ್ರ ಮಾಡುವುದಕ್ಕೆ 2018ರಲ್ಲೇ ನಾನು ಮುಂದಾಗಿದ್ದೆ. ಈ ಕುರಿತು 2018ರ ಜೂನ್ 10ರಂದು ಟ್ವೀಟ್ ಸಹ ಮಾಡಿದ್ದೆ. ಈಗ ನಡೆಯುತ್ತಿರುವ ಕೆಲವು ಭಯ ಹುಟ್ಟಿಸುವ ಘಟನೆಗಳಿಗೆ ಬಹಳ ಹತ್ತಿರವಾಗಿದೆ ಈ ಕಥೆ’ ಎಂದು ಆರ್.ಜಿ.ವಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಎರಡು ವರ್ಷದ ಹಿಂದೆ ಮಾಡಿದ ಟ್ವೀಟ್‌ನ್ನು ರೀಟ್ವೀಟ್ ಮಾಡಿ ನೆನಪಿಸಿದ್ದಾರೆ.
‘ವೈರಸ್’ ಎನ್ನುವ ಈ ಚಿತ್ರದಲ್ಲಿ ಭಯಂಕರ ವೈರಸ್ ಒಂದು ಇಡೀ ಮುಂಬೈ ನಗರವನ್ನು ಹೇಗೆ ತಲ್ಲಣಗೊಳಿಸುತ್ತದೆ ಎಂಬ ಕಥೆ ಇದೆ. ಸೆಂಟ್ರಲ್ ಆಫ್ರಿಕಾಗೆ ಹೋದ ಭಾರತೀಯ ಯುವಕನೊಬ್ಬ, ಅಲ್ಲಿ ಭಯಂಕರ ವೈರಸ್‌ವೊಂದರ ಸೋಂಕು ಅಂಟಿಸಿಕೊಂಡು ಬರುತ್ತಾನೆ. ಅದು ಕ್ರಮೇಣ ಮುಂಬೈ ನಗರದಲ್ಲೆಲ್ಲಾ ಹರಡುವುದಕ್ಕೆ ಪ್ರಾರಂಭವಾಗುತ್ತದೆ. ಎಲ್ಲರೂ ಅಂತರ ಕಾಯ್ದುಕೊಳ್ಳಬೇಕೆಂದು ಸರ್ಕಾರ ಆದೇಶ ನೀಡುತ್ತದೆ. ಈ ಮಧ್ಯೆ ಸುಮಾರು ಲಕ್ಷ ಜನ ಸಾಯುತ್ತಾರೆ. ಸೋಂಕು ತಗಲದವರು, ಆದಷ್ಟು ಬೇಗ ಊರು ಬಿಡುವುದಕ್ಕೆ ಸಜ್ಜಾಗುತ್ತದೆ. ಆದರೆ, ಮುಂಬೈ ಬಿಟ್ಟು ಯಾರೂ ಹೊರಹೋಗದಂತೆ ಸರ್ಕಾರ ಆದೇಶಿಸುತ್ತದೆ ಮತ್ತು ಯಾರಾದರೂ ಈ ನಿಯಮವನ್ನು ಉಲ್ಲಂಸಿದರೆ, ಶೂಟ್ ಅಟ್ ಸೈಟ್ ಆರ್ಡರ್ ನೀಡುತ್ತದೆ. ನಂತರ ಏನಾಗುತ್ತದೆ ಎನ್ನುವ ಈ ಚಿತ್ರವನ್ನು ಪಾರಸ್ ಸಾಂಘ್ವಿ ನಿರ್ಮಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ಚಿತ್ರ ಶುರು ಆಗಲೇ ಇಲ್ಲ.