

ಸಿನಿಮಾ ಫ್ಯಾಕ್ಟರಿ ಎಂದೇ ಕರೆಸಿಕೊಳ್ಳುವ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಹೆಚ್ಚು ಸದ್ದು ಮಾಡದೇ ಒಂದು ಸಿನಿಮಾ ಮಾಡಿದ್ದಾರೆ. ಆದರೆ, ಈ ಚಿತ್ರವು ತನ್ನ ವಿಷಯದಿಂದ ಈಗ ಸದ್ದು ಮಾಡುತ್ತಿದೆ. ಏ. 8ಕ್ಕೆ ಆ ಕೌತುಕ ಬಟಾಬಯಲಾಗಲಿದ್ದು, ಅಂದು ‘ಡೇಂಜರಸ್’ ಇಡೀ ದೇಶದಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಪೋಸ್ಟರ್, ಟೀಸರ್, ಟ್ರೇಲರ್ ಮೂಲಕವೇ ಮಾದಕತೆಯ ಮತ್ತೊಂದು ಮಗ್ಗುಲನ್ನು ‘ಡೇಂಜರಸ್’ ಚಿತ್ರದಲ್ಲಿ ತೋರಿಸಿರುವ ನಿರ್ದೇಶಕ ಆರ್ಜಿವಿ, ಈ ಸಿನಿಮಾ ಬಗ್ಗೆ ಮಾಹಿತಿ ನೀಡಲೆಂದೇ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು.
‘2018ರಲ್ಲಿ ನ್ಯಾಯಾಲಯ ನೀಡಿದ ಆದೇಶವೇ ಈ ಸಿನಿಮಾಕ್ಕೆ ಸ್ಪೂರ್ತಿ. ಇದೊಂದು ಲೆಸ್ಬಿಯನ್ ಪ್ರೇಮದ ಕುರಿತಾದ ಕಥೆ. ಕಳೆದ ಕೆಲವು ದಶಕಗಳಿಂದ ಲೈಂಗಿಕ ಕಾರ್ಯಕರ್ತೆಯರನ್ನು ಸಮಾಜ ನೋಡುವ ರೀತಿ ಬದಲಾಗಿದೆ. ಅದು ಕಾಮ ಕಥೆಯಾಗಿ ಉಳಿಯದೆ, ಪ್ರೇಮಕಥೆಯಾಗಿ ಉಳಿಯಬೇಕು. ಇದೆಲ್ಲವನ್ನು ಗಮನಿಸಿ ‘ಡೇಂಜರಸ್’ ಸಿನಿಮಾ ಮಾಡಿದ್ದೇನೆ. ಇದೇ ಏ. 8ಕ್ಕೆ ರಿಲೀಸ್ ಆಗಲಿದೆ’ ಎಂದರು.
ತೆಲುಗು, ತಮಿಳು, ಕನ್ನಡ, ಮಲಯಾಳಂ ಜತೆಗೆ ಹಿಂದಿಯಲ್ಲಿಯೂ ತೆರೆಗೆ ಬರಲಿರುವ ಈ ಕ್ರೖೆಂ ಥ್ರಿಲ್ಲರ್ ಚಿತ್ರದಲ್ಲಿ ನಯನಾ ಗಂಗೂಲಿ, ಅಪ್ಸರಾ ರಾಣಿ, ರಾಜ್ಪಾಲ್ ಯಾದವ್, ಘಾಜಿ, ಮಿಥುನ್ ಪುರಂದರಿ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರವೀಣ್ ಪೌಲ್ ಸಂಗೀತ, ಮಲ್ಹಾರ್ಬತ್ ಜೋಷಿ ಛಾಯಾಗ್ರಹಣ ಚಿತ್ರಕ್ಕಿದೆ.