ಸೋನು ಹಾಡಿಗೆ ಕೋಕ್!: ಕನ್ನಡ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಕ್ಕೆ ಕ್ರಮಕ್ಕೆ ಮುಂದಾದ ಚಿತ್ರತಂಡ

sonu nigam
Published on

ಬೆಂಗಳೂರು: ಅಭಿಮಾನಿಯೊಬ್ಬರ ಕನ್ನಡಾಭಿಮಾನಿವನ್ನು ಪಹಲ್ಗಾಮ್ ಘಟನೆಗೆ ಹೋಲಿಸಿ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ವಿವಿಧ ಕನ್ನಡಪರ ಸಂಘಟನೆಗಳು ಗಾಯಕನನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಗಾಯಕನ ವಿರುದ್ದ ಖಂಡನೆ ವ್ಯಕ್ತವಾಗಿ, ಅಸಹಕಾರ ನೀತಿ ಅನುಸರಿಸುವ ತೀರ್ಮಾನಕ್ಕೆ ಬಂದಿತ್ತು. ಬಳಿಕ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳಿದರೂ ಕೂಡ ಅಕ್ರೋಶ ನಿಂತಿರಲಿಲ್ಲ. ಇದೇ ಸಮಯದಲ್ಲಿ ಕನ್ನಡದ ಚಿತ್ರವೊಂದಕ್ಕೆ ಸೋನು ನಿಗಮ್ ಹಾಡಿದ ಹಾಡಿಗೆ ಕೋಕ್ ನೀಡಲು ಚಿತ್ರತಂಡ ಮುಂದಾಗಿದೆ.

ರಾಮ್ ನಾರಾಯಣ್ ನಿರ್ದೇಶನದ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ಅಭಿನಯಿಸಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ಗಾಯಕ ಸೋನು ನಿಗಮ್ ‘ಮನಸು ಹಾಡ್ತದೆ’ ಎಂಬ ಶೀರ್ಷಿಕೆ ಗೀತೆಗೆ ಧ್ವನಿಯಾಗಿದ್ದರು. ಇದೀಗ, ಆ ಹಾಡನ್ನು ಕೈಬಿಡಲು ಚಿತ್ರತಂಡ ಮುಂದಾಗಿದೆ. ಇದೇ ಹಾಡನ್ನು ಗಾಯಕ ಚೇತನ್ ಅವರಿಂದ ಹಾಡಿಸಲಾಗುತ್ತಿದೆ. ಯೋಗರಾಜ್ ಭಟ್ ರಚಿಸಿರುವ ಈ ಗೀತೆಗೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ‘ಸೋನು ನಿಗಮ್ ಉತ್ತಮ ಗಾಯಕ. ಆದರೆ, ಇತ್ತೀಚೆಗೆ ಅವರು ನೀಡಿದ ಹೇಳಿಕೆ ನಮಗೆ ತುಂಬಾ ಬೇಸರವಾಗಿದೆ. ಹೀಗಾಗಿ ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡನ್ನು ತೆಗೆದುಹಾಕಿದ್ದೇವೆ. ಇದೇ ಹಾಡನ್ನು ಕನ್ನಡದ ಗಾಯಕ ಚೇತನ್ ಬಳಿ ಹಾಡಿಸಿದ್ದು, ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ’ ಎಂದು ನಿರ್ದೇಶಕ ರಾಮ್‌ನಾರಾಯಣ್ ಮಾಹಿತಿ ನೀಡಿದ್ದಾರೆ. ಮಡೆನೂರು ಮನು ಸೇರಿ ಮೌನ ಗುಡ್ಡೆಮನೆ, ಸೋನಲ್ ಮೊಂಟೇರೊ ಕಲಾ ಬಳಗದಲ್ಲಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವು ಇದೇ ಮೇ 23ರಂದು ಬಿಡುಗಡೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net