

ಬೆಂಗಳೂರು: ಡಾ. ರಾಜಕುಮಾರ್ ಅವರ ಜನಪ್ರಿಯ ಹಾಡುಗಳ ಪೈಕಿ ‘ವೀರಕೇಸರಿ’ ಚಿತ್ರದ ‘ಮೆಲ್ಲುಸಿರೇ ಸವಿಗಾನ ...’ ಸಹ ಒಂದು. ಘಂಟಸಾಲ ಸಂಯೋಜಿಸಿರುವುದರ ಜತೆಗೆ ಪಿ. ಸುಶೀಲ ಅವರೊಂದಿಗೆ ಹಾಡಿರುವ ಈ ಹಾಡು, ಕನ್ನಡದ ಕ್ಲಾಸಿಕ್ ಗೀತೆಗಳಲ್ಲಿ ಒಂದಾಗಿದೆ. ಈಗ ಈ ಹಾಡನ್ನು ‘ಸ್ಪೂಕಿ ಕಾಲೇಜ್’ ಚಿತ್ರಕ್ಕಾಗಿ ರೀಮಿಕ್ಸ್ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಹಾಡಿಗೆ ‘ಏಕ್ ಲವ್ ಯಾ’ ನಾಯಕಿ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.
ಈ ಹಾಡನ್ನು ದಾಂಡೇಲಿಯ ಅರಣ್ಯ ಪ್ರದೇಶದಲ್ಲಿ ಸೆಟ್ ನಿರ್ವಿುಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನ ಕುರಿತು ಮಾತನಾಡುವ ನಿರ್ದೇಶಕ ಭರತ್, ‘ನಾವು ಈ ಹಾಡನ್ನು ಬಲವಂತವಾಗಿ ತುರುಕಿಲ್ಲ. ಚಿತ್ರದ ಕಥೆಯನ್ನು ಹೇಳುವ ಹಾಡೊಂದು ಬೇಕಿತ್ತು. ‘ಮೆಲ್ಲುಸಿರೇ ಸವಿಗಾನ ...’ ಹಾಡನ್ನು ಕೇಳಿದಾಗ, ಸೂಕ್ತ ಎಂದನಿಸಿತು. ಹಾಗಾಗಿ, ಈ ಹಾಡನ್ನು ಆಯ್ಕೆ ಮಾಡಿಕೊಂಡೆವು’ ಎನ್ನುತ್ತಾರೆ.
ಮುಕ್ತಾಯ ಹಂತ ತಲುಪಿರುವ ‘ಸ್ಪೂಕಿ ಕಾಲೇಜ್’ನ ಬಹುತೇಕ ಚಿತ್ರೀಕರಣ ಧಾರವಾಡದ 100ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕಾಲೇಜೊಂದರಲ್ಲಿ ನಡೆದಿದೆ. ಈ ಹಿಂದೆ ‘ರಂಗಿತರಂಗ’ ಮತ್ತು ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳನ್ನು ನಿರ್ವಿುಸಿದ್ದ ಎಚ್.ಕೆ. ಪ್ರಕಾಶ್ ಈ ಚಿತ್ರವನ್ನು ನಿರ್ವಿುಸಿದ್ದಾರೆ. ವಿವೇಕ್ ಸಿಂಹ, ‘ದಿಯಾ’ ಖುಷಿ, ಕೆ.ಎಸ್. ಶ್ರೀಧರ್, ವಿಜಯ್ ಚೆಂಡೂರ್, ರಘು ರಾಮನಕೊಪ್ಪ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಮತ್ತು ಮನೋಹರ್ ಜೋಷಿ ಛಾಯಾಗ್ರಹಣವಿದೆ.