ರೀಲ್ ಪೊಲೀಸ್, ರಿಯಲ್ ಸಾಹಸ!; ಪುಂಡರಿಗೆ ಚಳಿ ಬಿಡಿಸಿದ ಖಡಕ್ ಪೊಲೀಸ್ ಪ್ರಿಯಾ

Girija
Published on

ಬೆಂಗಳೂರು: ‘ಸಲಗ’ ಯಶಸ್ಸಿನ ಬಳಿಕ ‘ದುನಿಯಾ’ ವಿಜಯ್ ನಿರ್ದೇಶಿಸುತ್ತಿರುವ ಚಿತ್ರ ‘ಭೀಮ’. ಗಿಲಿಗಿಲಿ ಚಂದ್ರು, ಗಿರಿಜಾ, ಬ್ಲಾ್ಯಕ್ ಡ್ರಾಗನ್, ಆಶ್ ಮೆಲೋ, ಶುಂಠಿ... ಹೀಗೆ ಹೊಸ ಹೊಸ ಪಾತ್ರಗಳನ್ನು ವಿಜಯ್ ಈ ಚಿತ್ರದಲ್ಲಿ ಪರಿಚಯಿಸುತ್ತಿದ್ದಾರೆ. ಮೂಲತಃ ರಂಗಭೂಮಿ ಕಲಾವಿದೆ, ಕೆಲವು ಚಿತ್ರಗಳಲ್ಲು ನಟಿಸಿರುವ ಪ್ರಿಯಾ ಶಠಮರ್ಷಣ, ಗಿರಿಜಾ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಾತ್ರದ ಬಗ್ಗೆ ಹೇಳಿಕೊಳ್ಳುವ ಅವರು, ‘ನನಗೆ ಸಣ್ಣ ವಯಸ್ಸಿನಿಂದಲೂ ಪೊಲೀಸ್ ಆಗುವ ಆಸೆಯಿತ್ತು. ಈಗ ಸಿನಿಮಾದಲ್ಲಿ ಆ ಪಾತ್ರ ನಿಭಾಯಿಸುವ ಅವಕಾಶ ಸಿಕ್ಕಿದೆ. ಖಡಕ್ ಪೊಲೀಸ್ ಇನ್ಸ್​ಪೆಕ್ಟರ್ ಗಿರಿಜಾ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎನ್ನುತ್ತಾರೆ.

‘ಭೀಮ’ ಚಿತ್ರದಲ್ಲಿ ಪ್ರಿಯಾ ಭಾಗದ ಚಿತ್ರೀಕರಣ ಲೈವ್ ಲೊಕೇಷನ್​ಗಳಲ್ಲಿ ಇರುತ್ತಿದ್ದ ಕಾರಣ, ಮನೆಯಿಂದಲೇ ಪೊಲೀಸ್ ಯೂನಿಫಾಮ್ರ್ ಧರಿಸಿ ಹೊರಡುತ್ತಿದ್ದರಂತೆ. ‘ಜನರ ನಡುವೆಯೇ, ಅವರಿಗೆ ಗೊತ್ತಾಗದಂತೆ ಹಲವೆಡೆ ಚಿತ್ರೀಕರಣ ಮಾಡಿದ್ದೇವೆ. ನಾನು ಶೂಟಿಂಗ್​ಗೆ ಹೋಗುವಾಗ ನನ್ನನ್ನು ಪೊಲೀಸ್ ಅಂದುಕೊಂಡು ದಾರಿಯಲ್ಲಿ ಸಲ್ಯೂಟ್ ಮಾಡಿದವರಿದ್ದಾರೆ. ಟ್ರಾಫಿಕ್ ಜಾಮ್ ಆದಾಗ ದಾರಿ ಮಾಡಿಕೊಟ್ಟವರಿದ್ದಾರೆ. ಹಾಗಂತ ನಾನೆಲ್ಲೂ ದುರುಪಯೋಗ ಮಾಡಿಕೊಂಡಿಲ್ಲ’ ಎನ್ನುತ್ತಾರೆ. ಕೆಲವು ಘಟನೆಗಳು ಅವರಿಗೆ ಖಾಕಿ ಸಮವಸ್ತ್ರದ ಶಕ್ತಿ ಏನು? ಎಂಬುದರ ಅರಿವು ಮಾಡಿಕೊಟ್ಟಿವೆಯಂತೆ.

ಅದರ ಬಗ್ಗೆ ಹೇಳುವ ಪ್ರಿಯಾ, ‘ಒಮ್ಮೆ ನಾನು ಚಿತ್ರೀಕರಣ ಮುಗಿಸಿಕೊಂಡು ವಾಪಸ್ ಬರುವುದು ರಾತ್ರಿ 10 ಗಂಟೆಯಾಗಿತ್ತು. ಆಗ ಮದ್ಯ ಸೇವಿಸಿ ಬೈಕ್​ನಲ್ಲಿ ಬರುತ್ತಿದ್ದ ಮೂವರು ಹುಡುಗರು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಾ, ಕೆಟ್ಟದಾಗಿ ಕಮೆಂಟ್ ಮಾಡಿದರು. ನನಗೆ ತುಂಬ ಕೋಪ ಬಂದು, ತಕ್ಷಣ ಕಾರ್ ನಿಲ್ಲಿಸಿ, ಯಾರಿಗೋ ಬೈದೆ? ಇನ್ನೊಮ್ಮೆ ಇಲ್ಲಿ ಕಾಣಿಸಿಕೊಂಡರೆ ಅಂತ ಕಾರ್​ನಿಂದ ಕೆಳಗಿಳಿದೆ. ನನ್ನನ್ನು ಪೊಲೀಸ್ ಯೂನಿಫಾಮರ್್​ನಲ್ಲಿ ನೋಡಿದ ಆ ಹುಡುಗರು ಹೆದರಿ ಅಲ್ಲಿಂದ ಓಡಿಬಿಟ್ಟರು’ ಎಂದು ನಗುತ್ತಾರೆ. ಇನ್ನು ‘ಭೀಮ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಪ್ರಿಯಾ, ಅದರ ಜತೆ ಮಂಸೋರೆ ನಿರ್ದೇಶನದ ‘19 20 21’ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಹಾಗೂ ‘ಸೈಡ್​ವಿಂಗ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ‘ಲಕ್ಷಣ’ ಎಂಬ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net