

ಚಿತ್ರ: ದ ಬೆಂಗಾಲ್ ಫೈಲ್ಸ್
ನಿರ್ದೇಶನ: ವಿವೇಕ್ ಅಗ್ನಿಹೋತ್ರಿ
ತಾರಾಗಣ: ದರ್ಶನ್ ಕುಮಾರ್, ಸಿಮ್ರಟ್ ಕೌರ್, ಏಕಲವ್ಯ ಸೂಡ್, ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ನಮಾಶಿ ಚಕ್ರವರ್ತಿ, ಶಾಶ್ವತ ಚಟರ್ಜಿ ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರ ಟೆಲಜಿಯ ಕೊನೆಯ ಸಿನಿಮಾ "ದ ಬೆಂಗಾಲ್ ಫೈಲ್ಸ್'. ಈ ಹಿಂದೆ "ದ ಟಾಷ್ಕೆಂಟ್ ಫೈಲ್ಸ್'ನಲ್ಲಿ ದಿವಂಗತ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಅನುಮಾನಾಸ್ಪದ ಸಾವು ಮತ್ತು "ದ ಕಾಶ್ಮೀರ್ ಫೈಲ್ಸ್'ನಲ್ಲಿ 90ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಹಿಂಸಾಚಾರದ ಕಥೆಗಳನ್ನು ಹೇಳಿದ್ದ ಅವರು, ಇದೀಗ "ದ ಬೆಂಗಾಲ್ ಫೈಲ್ಸ್'ನಲ್ಲಿ 194ರ ದಶಕದಲ್ಲಿ ನಡೆದ ಕೋಮು ಹಿಂಸಾಚಾರದ ಜತೆ ಜತೆಗೆ ಪ್ರಸ್ತುತ ರಾಜಕೀಯ ಮೇಲಾಟಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಮುರ್ಷಿದಾಬಾದ್ನಲ್ಲಿ ನಡೆಯುವ ಗೀತಾ ಮಂಡಲ್ ನಾಪತ್ತೆ ಪ್ರಕರಣದ ತನಿಖೆಗೆ ಸಿಬಿಐ ಅಧಿಕಾರಿ ಶಿವ ಪಂಡಿತ್ (ದರ್ಶನ್) ಬಂಗಾಳಕ್ಕೆ ಬರುತ್ತಾನೆ. ಅಲ್ಲಿ ಆತನಿಗೆ ಇಬ್ಬರ ಮೇಲೆ ಅನುಮಾನ. ಒಬ್ಬ ಅಲ್ಲಿನ ಶಾಸಕ ಸರ್ದಾರ್ ಹುಸೇನಿ. ಮತ್ತೊಬ್ಬರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಹಿರಿಯ ಜೀವ ಭಾರತಿ ಬ್ಯಾನರ್ಜಿ (ಪಲ್ಲವಿ). ಗೀತಾ ಮಂಡಲ್ ಮಿಸ್ಸಿಂಗ್ ಪ್ರಕರಣದ ತನಿಖಗೆ ನಡೆಸುತ್ತಾ ಆತ ಸರ್ದಾರ್ ಮತ್ತೆ ಭಾರತಿ ಇಬ್ಬರ ಇತಿಹಾಸ ಕೆದಕುತ್ತಾನೆ. ಆಗ ಕಥೆಯು 1942ಕ್ಕೆ ಕರೆದೊಯ್ಯುತ್ತದೆ. ಜಸ್ಟೀಸ್ ಬ್ಯಾನರ್ಜಿ ಪುತ್ರಿ ಭಾರತಿ ತನ್ನ ಕಾಲೇಜು ಘಟಿಕೋತ್ಸವದಲ್ಲೇ ಗವರ್ನರ್ ಮೇಲೆ ಗುಂಡಿನ ದಾಳಿ ನಡೆಸಿ ಜೈಲು ಸೇರಿದ್ದ ಗಟ್ಟಿಗಿತ್ತಿ. ಕ್ರಮೇಣ ಗಾಂಧೀಜಿಯವರ ಶಾಂತಿಮಂತ್ರಕ್ಕೆ ಮನಸೋತು ಬ್ರಿಟಿಷರ ವಿರುದ್ಧ ಅಹಿಂಸಾ ಹೋರಾಟಕ್ಕೆ ಮುಂದಾಗುತ್ತಾಳೆ. ಅದರ ನಡುವೆಯೇ ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಚರ್ಚೆ ವೇಗ ಪಡೆದಿರುತ್ತದೆ. ಹಾಗೇ ಬಂಗಾಳವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂದು ಹುನ್ನಾರ ನಡೆಸುವ ಮುಸ್ಲಿಂ ನಾಯಕರು ಡೈರೆಕ್ಟ್ ಆ್ಯಕ್ಷನ್ ಡೇ ಘೋಷಿಸಿ, ಹಿಂದುಗಳ ನರಸಂಹಾರಕ್ಕೆ ಮುಂದಾಗುತ್ತಾರೆ. ಮೊದಲು ಕೊಲ್ಕತ್ತಾದಲ್ಲಿ ನಂತರ ನವೋಖಲಿ ಸೇರಿ ಹಲವೆಡೆ ಈ ಕೋಮುದಳ್ಳುರಿ ಹಬ್ಬಿ ಸಾವಿರಾರು ಜನರ ಮಾರಣಹೋಮಕ್ಕೆ ಕಾರಣವಾಗುತ್ತದೆ. ಅದರ ವಿರುದ್ಧ ಗೋಪಾಲ್ ಪತ್ತಾ ಅವರಂತಹ ಹಿಂದು ಮುಖಂಡರು ಹೇಗೆ ಹೋರಾಡುತ್ತಾರೆ ಎಂಬುದನ್ನೂ ತೋರಿಸಲಾಗಿದೆ.
ಭಾರತ - ಪಾಕಿಸ್ತಾನ ವಿಭಜನೆ 1947ರಲ್ಲಿ ಪ್ರಾರಂಭವಾಗಿ 2025ರವರೆಗೂ ಮುಂದುವರಿದಿದೆ ಎಂಬುದನ್ನು ಎರಡು ಕಾಲಟ್ಟಗಳ ಹಲವು ನೈಜ ಟನೆಗಳಿಂದ ಸ್ಫೂರ್ತಿ ಪಡೆದು ಕಥೆ ಹೆಣೆದಿದ್ದಾರಿ ವಿವೇಕ್ ಅಗ್ನಿಹೋತ್ರಿ. ಇದು 205 ನಿಮಿಷ ಅರ್ಥಾತ್ 3.25 ಗಂಟೆಗಳ ಸುದೀರ್ ಚಿತ್ರವಾಗಿದ್ದು, ಮೇಕಿಂಗ್, ಸಂಭಾಷಣೆಯ ಜತೆಗೆ ದಿಗ್ಗಜ ಕಲಾವಿದರ ಮನೋಜ್ಞ ಅಭಿನಯ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಆದರೂ, ಕೆಲವೆಡೆ ಮೋನೋಲಾಗ್ಗಳು ಅತಿ ಎನಿಸುವುದುಂಟು. ಗಂಭೀರ ಕಥೆಯನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದರೂ, ಹಲವೆಡೆ ಮೃತ ದೇಹಗಳ ಓಡಾಟ ಪ್ರೇಕ್ಷಕರಿಗೆ ಇರುಸುಮುರುಸು ಉಂಟು ಮಾಡುತ್ತದೆ. ಇತಿಹಾಸದಲ್ಲಿ ಹೀಗೆಲ್ಲಾ ನಡೆದಿದೆಯಾ, ಈಗಲೂ ಇದೆಲ್ಲಾ ನಡೆಯುತ್ತಿದೆಯಾ ಎಂಬ ಪ್ರಶ್ನೆ ಮೂಡಿಸುವುದುಂಟು. ಹಾಗಂತ ಸ್ವಲ್ಪ ರೀಸರ್ಚ್ ನಡೆಸಿದರೆ, ಬಹುತೇಕ ಸತ್ಯ ಎಂಬುದರ ಅರಿವೂ ಆಗುತ್ತದೆ. ಒಟ್ಟಾರೆ, ಇತಿಹಾಸವನ್ನು ನೆನಪಿಸಿಕೊಂಡು, ಭವಿಷ್ಯದ ಬಗ್ಗೆ ಅರಿವು ಮೂಡಿಸಲು "ದ ಬೆಂಗಾಲ್ ಫೈಲ್ಸ್' ಉತ್ತಮ ಸಿನಿಮಾ.
ಸ್ಟಾರ್: 3.5