ನಿರ್ಮಾಪಕ ರವೀಂದರ್​ ವಿರುದ್ಧ ವಂಚನೆ ಆರೋಪ: ಪ್ರಕರಣ ದಾಖಲು, ಕಾನೂನು ಕ್ರಮ ಸಾಧ್ಯತೆ

VJ Mahalakshmi
Published on

ಚೆನ್ನೈ: ನಟಿ ಮಹಾಲಕ್ಷ್ಮೀ ಅವರನ್ನು ಮದುವೆ ಆಗುವ ಮೂಲಕ ಭಾರೀ ಸುದ್ದಿಯಾಗಿದ್ದ ದಡೂತಿ ದೇಹದ ನಿರ್ಮಾಪಕ ರವೀಂದರ್​ ಚಂದ್ರಶೇಖರನ್​ ವಿರುದ್ಧ ವಂಚನೆ ಆರೋಪ ದಾಖಲಾಗಿದ್ದು, ಚೆನ್ನೈ ಕೇಂದ್ರ ಅಪರಾಧ ವಿಭಾಗ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

15 ಲಕ್ಷ ರೂ. ವಂಚನೆ

ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ವಿಜಯ್​ ಎಂಬುವರು ನೀಡಿರುವ ದೂರಿನ ಆಧಾರದ ಮೇಲೆ ರವೀಂದರ್​ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ವಿಚಾರಣೆಗೆ ಬರುವಂತೆ ರವಿಂದರ್​ಗೆ ನೋಟಿಸ್​ ನೀಡಲಾಗಿದೆ. ರವೀಂದರ್​ ಅವರು ವಿಚಾರಣೆಯನ್ನೂ ಎದುರಿಸಿದ್ದಾರೆ. ಸುಮಾರು 15 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಿನಿಮಾಗಾಗಿ ಹೂಡಿಕೆ

ವಿಜಯ್​ ದೂರಿನ ಪ್ರಕಾರ ಅವರು ಭಾರೀ ಮೊತ್ತದ ಹಣವನ್ನು ಸಿನಿಮಾ ಪ್ರಾಜೆಕ್ಟ್​ ಒಂದಕ್ಕೆ ರವೀಂದರ್​ ಜತೆ ಸೇರಿ ಹೂಡಿಕೆ ಮಾಡಿದ್ದರಂತೆ. ಆದರೆ, ರವಿಂದರ್​ ಅವರ ಸಿನಿಮಾದ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿ ನೀಡಿದೆ, ತಮ್ಮ ಬದ್ಧತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಇದರಿಂದ ಮೋಸ ಹೋಗಿದ್ದೇನೆ ಎಂದು ಭಾವಿಸಿ ರವೀಂದರ್​ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾಗಿ ವಿಜಯ್​ ಹೇಳಿದ್ದಾರೆ.

ವಿಚಾರಣೆ ಎದುರಿಸಿದ ರವೀಂದರ್​

ಆನ್​ಲೈನ್​ ಮೂಲಕ ದೂರು ದಾಖಲಾಗಿದ್ದು, ತಕ್ಷಣ ಪ್ರಕರಣ ದಾಖಲಿಸಿಕೊಂಡಿರುವ ಚೆನ್ನೈ ಕೇಂದ್ರ ಅಪರಾಧ ವಿಭಾಗ ರವೀಂದರ್​ ಅವರನ್ನು ವಿಚಾರಣೆಗೆ ಬರುವಂತೆ ಕರೆಯಿತು. ಅಲ್ಲದೆ, ಸಾಕ್ಷಿಗಳನ್ನು ಕಲೆಹಾಕುವ ಪ್ರಕ್ರಿಯೆಯೂ ಪೊಲೀಸರು ನಿರತರಾಗಿದ್ದಾರೆ. ನೋಟಿಸ್ ಸ್ವೀಕರಿಸಿರುವ ರವೀಂದರ್ ಅವರು ತನಿಖೆಗೆ ಹಾಜರಾಗಿ, ಅಧಿಕಾರಿಗಳೊಂದಿಗೆ ಸಹಕರಿಸಿದ್ದಾರೆ ಮತ್ತು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಎರಡೂ ಕಡೆ ಮಾಡಿರುವ ಆರೋಪಗಳ ಸಿಂಧುತ್ವವನ್ನು ನಿರ್ಧರಿಸಲು ಇಬ್ಬರೂ ಪ್ರಸ್ತುತಪಡಿಸಿದ ಸಾಕ್ಷ್ಯಗಳು, ಹೇಳಿಕೆಗಳು ಮತ್ತು ದಾಖಲೆಗಳನ್ನು ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net